

ಹಗರಿಬೊಮ್ಮನಹಳ್ಳಿ: ಕಾಯಕದಿಂದ ವಿಶ್ವಕರ್ಮ ಸಮುದಾಯದವರು ವಿಶ್ವಕ್ಕೆ ನಾಯಕರಾಗಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಸಮುದಾಯವನ್ನು ವಿಶೇಷವಾಗಿ ಗುರುತಿಸಿದೆ ಎಂದು ಹಂಪಸಾಗರದ ನವಲಿ ಹಿರೇಮಠ ಶಿವಲಿಂಗ ರುದ್ರಮುನಿ ಶಿವಚಾರ್ಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ:ಕುಕ್ಕಜೆಯಲ್ಲಿ ವಿಶ್ವಕರ್ಮ ಸಮಾಜದ ಮಹಾಸಭೆ
ಜಗದ್ಗುರು ಶ್ರೀ ಮೌನೇಶ್ವರರ ಜಯಂತುತ್ಸವ ನಿಮಿತ್ತ ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ವಿಶ್ವಕರ್ಮ ಸಮುದಾಯ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಉಪನಯನ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ಸಂಸ್ಕಾರ ಕಲಿಸಿದರೆ, ಅವರಿಗಾಗಿ ಸಂಪತ್ತುಗಳಿಸುವ ಅವಶ್ಯ ಇಲ್ಲ. ಆದರೆ, ಸಂಸ್ಕಾರ ಕಲಿಸದಿದ್ದರೆ ಆಸ್ತಿ ಮಾಡಬೇಕಾಗುತ್ತದೆ ಎಂದರು.
ಉಪನ್ಯಾಸಕ ವೀರೇಶ ಬಡಿಗೇರ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಅವರು ಕಾಯಕಯೋಗಿಗಳನ್ನು ಗುರುತಿಸಿದ್ದರು. ಆದರೆ, ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯವಾಗಿ ಸ್ಥಾನಮಾನ ಇಲ್ಲದಿರುವುದು ಬೇಸರದ ಸಂಗತಿ. ಆದ್ದರಿಂದ ಒಗ್ಗಟ್ಟಿನಿಂದ ಇರಬೇಕು. ಉನ್ನತ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ಮುದ್ದಾಬಳ್ಳಿ ವಿಶ್ವಕರ್ಮ ಏಕದಂಡಿಗಿಮಠದ ಪೀಠಾಧಿಪತಿ ಗುರುನಾಥ ಸ್ವಾಮೀಜಿ ಮಾತನಾಡಿ, ತಂತ್ರಜ್ಞಾನ ಬದಲಾದಂತೆ ಸಮುದಾಯ ಬೆಳೆಯಬೇಕು. ಉನ್ನತ ಶಿಕ್ಷಣದಿಂದ ಆರ್ಥಿಕ ಸದೃಢತೆ ಸಾಧ್ಯ. ರಾಜ್ಯದೆಲ್ಲೆಡೆ ಸಮುದಾಯದವರು ಒಗ್ಗಟ್ಟಿನಿಂದ ಇರಬೇಕು. ಸರ್ಕಾರ ಸಮುದಾಯವನ್ನು ಗುರುತಿಸುವಂತಾಗಬೇಕು ಎಂದರು.
ಶ್ರೀ ಮೌನೇಶ್ವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ನಂತರ 22 ವಟುಗಳಿಗೆ ಉಪನಯನ, 4 ಜೋಡಿಗಳ ಮದುವೆ ನಡೆಯಿತು. ಪುರೋಹಿತರಾದ ಬಸವರಾಜ, ಪಿ.ಸಂತೋಷ ಕುಮಾರ್, ಸಂಘದ ತಾಲೂಕು ಅಧ್ಯಕ್ಷ ಬಡಿಗೇರ ಬಸವರಾಜ್, ಗೌರವಾಧ್ಯಕ್ಷ ಸಿ.ಎಚ್.ಸಿದ್ದರಾಜ, ಉಪಾಧ್ಯಕ್ಷ ಕಮ್ಮಾರ ಮಂಜುನಾಥ, ಧರ್ಮಕರ್ತ ಎನ್.ಕೃಷ್ಣಮೂರ್ತಿ, ಆರ್‌ಎಸ್‌ಎಸ್‌ಎನ್ ಅಧ್ಯಕ್ಷ ದಾದಮ್ಮನವರ ಬಸವರಾಜ, ಸಮುದಾಯದ ನೌಕರರ ಸಂಘದ ಅಧ್ಯಕ್ಷ ಎ.ರಾಘವೇಂದ್ರ, ಮಹಿಳಾ ಸಂಘದ ಉಪಾಧ್ಯಕ್ಷೆ ಸೌಭಾಗ್ಯಮ್ಮ, ಬಿ.ಜಿ.ಬಡಿಗೇರ ಇತರರಿದ್ದರು.