

ಬಾಳೆಹೊನ್ನೂರು: ಮಾತುಗಳಿಗೆ ಕೊಲ್ಲುವ ಶಕ್ತಿ ಮತ್ತು ಕಾಪಾಡುವ ಸಾಮರ್ಥ್ಯವಿದೆ. ಮಾತುಗಳಲ್ಲಿ ಕರುಣೆ ಹಾಗೂ ನೈಜತೆಯಿದ್ದರೆ ನಮ್ಮ ಬದುಕು ಬದಲಾಗುವುದರಲ್ಲಿ ಸಂದೇಹವಿಲ್ಲ ಎಂದು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಅನಾರೋಗ್ಯಕರ ಸಮಾಜಕ್ಕೆ ಅಡಿಗಲ್ಲು ಇಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯ ಜಾಗೃತಗೊಂಡು ಆದರ್ಶ ಸಂಸ್ಕೃತಿ ಉಳಿವಿಗೆ ಶ್ರಮಿಸಬೇಕಿದೆ. ಮನುಷ್ಯನಲ್ಲಿ ಅದ್ಭುತ ಶಕ್ತಿಯಿದೆ. ಬೀಜದಿಂದ ವೃಕ್ಷ ಬೆಳೆಯುತ್ತದೆ. ಸುಂದರ ಹೂ ರುಚಿಯಾದ ಹಣ್ಣು ಕೊಡುತ್ತದೆ. ನೆರಳು ಮತ್ತು ಶುದ್ಧವಾದ ಗಾಳಿಯನ್ನು ಸಹ ಕೊಡುತ್ತದೆ. ಮನುಷ್ಯನಲ್ಲಿರುವ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡು ಬಾಳಿದರೆ ಜೀವನ ಉತ್ತುಂಗಕ್ಕೇರುವುದರಲ್ಲಿ ಸಂಶಯವಿಲ್ಲ ಎಂದರು.
ನೀರಿಗಿಂತ ತಿಳಿಯಾದದ್ದು ಜ್ಞಾನ, ಭೂಮಿಗಿಂತ ಭಾರವಾದದ್ದು ಪಾಪ, ಕಾಡಿಗೆಗಿಂತ ಕಪ್ಪಾಗಿರುವುದು ಕಳಂಕ, ಸೂರ್ಯನಿಗಿಂತ ಪ್ರಖರವಾದದ್ದು ಕೋಪ, ಮಂಜಿಗಿಂತ ಹಗುರವಾದದ್ದು ಪುಣ್ಯ, ಗಾಳಿಗಿಂತ ವೇಗವಾಗಿರುವುದು ಮನಸ್ಸು ಇವುಗಳನ್ನು ಅರಿತು ಬಾಳಿದರೆ ಬದುಕು ಸಾರ್ಥಕವಾಗಲಿದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವುದನ್ನು ಯಾರೂ ಮರೆಯಲಾಗದ ಎಂದರು.
ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು, ತಡವಲಗಾ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಸಂಸ್ಕೃತ ಪಾಠ ಶಾಲೆಯಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾದ ಶ್ರೀ ಜಗದ್ಗುರು ಶಿವಾನಂದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಶ್ರೀರಂಭಾಪುರಿ ಜಗದ್ಗುರುಗಳು ಅಂಕಪಟ್ಟಿಯನ್ನು ವಿತರಿಸಿ ಶುಭ ಹಾರೈಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ, ಶಿಕ್ಷಕ ವೀರೇಶ ಕುಲಕರ್ಣಿ ಮತ್ತಿತರರು ಇದ್ದರು.