

ತೀರ್ಥಹಳ್ಳಿ: ಸಹಕಾರಿ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುವ ಬದ್ಧತೆಯನ್ನು ಹೊಂದಿರಬೇಕು ಎಂದು ಸಹ್ಯಾದ್ರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಚ್.ಎನ್.ವಿಜಯದೇವ್ ಹೇಳಿದರು.
ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಸಹ್ಯಾದ್ರಿ ಅಡಕೆ ಮಾರಾಟ ಸಹಕಾರ ಸಂಘದ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, 20 ವರ್ಷಗಳ ಹಿಂದೆ ಆರಂಭವಾದ ಸಂಸ್ಥೆ ಕಳೆದ ಸಾಲಿನಲ್ಲಿ 1,200 ಕೋಟಿ ರೂ.ಗೂ ಹೆಚ್ಚಿನ ವ್ಯವಹಾರ ನಡೆಸಿದೆ. ಕಲಬುರಗಿ ಜಿಲ್ಲೆಯನ್ನು ಹೊರತು ಪಡಿಸಿ ರಾಜ್ಯಮಟ್ಟದಲ್ಲಿ ಷೇರುದಾರರನ್ನು ಆಕರ್ಷಿಸಿದೆ. ಕಳೆದ ಸಾಲಿನಲ್ಲಿ 3.53 ಕೋಟಿ ರೂ. ಜಿಎಸ್‌ಟಿ ಕಟ್ಟಿದ್ದು 10 ಲಕ್ಷ ರೂ. ವಿಮೆ ಹಣ ಪಾವತಿಸಿದೆ ಎಂದರು.
2 ಕೋಟಿ ರೂ.ವರೆಗೆ ಆರ್ಥಿಕ ನೆರವನ್ನು ನೀಡಲಾಗಿದೆ. ಕಳೆದ ವರ್ಷ 25 ಸಾವಿರ ಮೂಟೆ ಅಡಕೆ ಬಂದಿದ್ದು, ನಮಗೆ ನಿರ್ವಹಿಸಲು ಅಸಾಧ್ಯವಾದಷ್ಟು ಅಡಕೆ ಬರುತ್ತಿದೆ. ಈ ವೇಗದ ಬೆಳವಣಿಗೆಗೆ ಆರ್ಥಿಕ ವ್ಯವಹಾರ, ಅಡಕೆ ಖರೀದಿ, ಚೀಟ್ ಫಂಡ್, ಪೆಟ್ರೋಲ್ ಬಂಕ್ ಮತ್ತು ಮಿನರಲ್ ವಾಟರ್ ಮುಂತಾದ ವ್ಯವಹಾರ ಕಾರಣವಾಗಿವೆ. ಸಾರಿಗೆ ವ್ಯವಸ್ಥೆ ಮಾತ್ರ ನಷ್ಟದಲ್ಲಿ ನಡೆಯುತ್ತಿದೆ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಕೋಟ್ಯಂತರ ರೂ ಮೌಲ್ಯದ ನಿವೇಶನಗಳು, ಸಂಸ್ಥೆಯ ಹೆಸರಿನಲ್ಲಿ ಸ್ಥಿರಾಸ್ತಿ ಇದೆ ಎಂದು ಹೇಳಿದರು.
ಸಹ್ಯಾದ್ರಿ ಸಂಸ್ಥೆಯ ಎಂಡಿ ಚಂದ್ರಕಲಾ, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ದುಗ್ಗಪ್ಪ ಗೌಡ, ಪರಮೇಶ್ವರ್ ಇತರರಿದ್ದರು. ಸಹ್ಯಾದ್ರಿ ಸಂಸ್ಥೆಯ ಸಭೆಯ ನಂತರ ಅದೇ ವೇದಿಕೆಯಲ್ಲಿ ಶರಾವತಿ ಸಹಕಾರ ಸಂಘದ ಸರ್ವಸದಸ್ಯರ ಸಭೆ ಸಂಘದ ಅಧ್ಯಕ್ಷ ಎಚ್.ವಿ.ಅಜಿತ್ ಅಧ್ಯಕ್ಷತೆಯಲ್ಲಿ ಜರುಗಿತು.