ಬದುಕಿನ ಸಾರವಿದ್ದರೆ ಸಾಹಿತ್ಯ, ಸಾಹಿತಿ ಜನಮಾನಸದಲ್ಲಿ ಚಿರಸ್ಥಾಯಿ

sri book
ಶೃಂಗೇರಿಯಲ್ಲಿ ಆಯೋಜಿಸಿದ್ದ ಸಾಹಿತಿ ಬಿ.ಶಿವಶಂಕರ್ ಅವರ ಹನಿಗವಿತೆ ಸಂಕಲನ ಬಿಡುಗಡೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಯೋಗಪ್ಪ, ಗುತ್ತಿಗೆದಾರರಾದ ರಮೇಶ್ ಶೂನ್ಯ, ಈಶ್ವರಪ್ಪ, ಮಣಿಕಂಠ ಅವರನ್ನು ಸನ್ಮಾನಿಸಲಾಯಿತು. ಕೋಟ ಶ್ರೀನಿವಾಸ ಪೂಜಾರಿ, ಎಂ.ಮಂಜುನಾಥ್ ಗೌಡ, ಸತ್ಯನಾರಾಯಣ್, ದೇವಪ್ಪ ಇತರರಿದ್ದರು.
Published on

ಶೃಂಗೇರಿ: ಶಬ್ದಗಳ ಜೋಡಣೆಯಿಂದ ಸಾಹಿತ್ಯ ಪರಿಪೂರ್ಣವಾಗಲು ಸಾಧ್ಯವಿಲ್ಲ. ಬದುಕಿನ ಅನುಭವದ ಸಾರದ ಸೂಕ್ಷ್ಮಹೊಂದಿರಬೇಕು. ಇಂಥ ಸಾಹಿತ್ಯದ ಜತೆಗೆ ಸಾಹಿತಿಯೂ ಜನಮಾನಸದಲ್ಲಿ ಶಾಶ್ವತ ಸ್ಥಾನ ಗಳಿಸಬಹುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಗುರುವಾರ ಶಾರದಾಂಬಾ ಪ್ರಕಾಶನ ಹಾಗೂ ತಾಲೂಕು ಕಸಾಪ ಆಯೋಜಿಸಿದ್ದ ಸಾಹಿತಿ ಬಿ.ಶಿವಶಂಕರ್ ಅವರ ಪದ-ಪದಾರ್ಥ ಹನಿಗವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದಾದರೂ ಫಲಕೊಟ್ಟೀತು ಎಂಬ ಸಾಹಿತಿಯ ನುಡಿ ಅಕ್ಷರಶಃ ಸತ್ಯ. ಸಾಹಿತಿ ಸದಾ ಅಧ್ಯಯನಶೀಲನಾಗಿ ಸುತ್ತಮುತ್ತಲಿನ ಬದುಕಿನ ಸೂಕ್ಷ್ಮಅರ್ಥೈಸಿಕೊಂಡು ಅದಕ್ಕೆ ಮೂರ್ತರೂಪ ನೀಡುವಲ್ಲಿ ಯಶಸ್ಸು ಗಳಿಸಬೇಕು. ಸಾಹಿತ್ಯ ಹಾಗೂ ಶಿಕ್ಷಣ ಅಗತ್ಯವಾದುದು. ಶಿಕ್ಷಣ ಕಲಾವಿದರು, ಸಾಹಿತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಆಗ ಸಮಾಜದ ಸ್ವಾಸ್ಥ್ಯ ಉಳಿಯುತ್ತದೆ. ಆದರೆ ಇಂದು ಶಿಕ್ಷಣ ಪಡೆದವರು ಸಮಾಜದ ಸ್ವಾಸ್ಥೃ ಉಳಿಸುವಲ್ಲಿ ಸೋತಿದ್ದಾರೆ ಎಂದರು.
ಹಳೇ ಕಾಲದ ಒಂದನೇ ಪಠ್ಯಪುಸ್ತಕಗಳಲ್ಲಿ ಇವನು ಈಶ, ಇವನು ಗಣಪ ಎಂದು ಚಿತ್ರ ಸಹಿತ ಅಕ್ಷರಗಳು ಇದ್ದವು. ಆದರೆ ಅದನ್ನು ಪ್ರಸ್ತುತ ಕೇಸರೀಕರಣ ಎಂದು ಹಲವರು ತಪ್ಪು ತಿಳಿವಳಿಕೆಯಿಂದ ಹೇಳಿಕೆ ನೀಡುತ್ತಿದ್ದಾರೆ. ಸಮಾಜದಲ್ಲಿ ಸಂಸ್ಕಾರ, ನಂಬಿಕೆಗಳನ್ನು ನಾವಿಂದು ದೂರ ಮಾಡುತ್ತಿದ್ದೇವೆ. ದೇಗುಲದಂತಿರುವ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಾರೆ. ನಮ್ಮೊಳಗಿನ ಭಾವಗಳು ಪ್ರಸ್ತುತ ಬರಿದಾಗುತ್ತಿರುವುದು ವಿಷಾದನೀಯ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಬದುಕಿನ ಎಲ್ಲ ವಸ್ತುಗಳೂ ಹನಿಗವಿತೆಗೆ ವಸ್ತುವಾಗಬಹುದು. ಗದ್ಯ ಹಾಗೂ ಪದ್ಯವನ್ನು ಅವಲೋಕನ ಮಾಡಿದಾಗ ಪದ್ಯಗಳಿಗೆ ಅದರದೇ ಆದ ಮೌಲ್ಯಗಳಿವೆ. ಹನಿಗವಿತೆ ಗಂಭೀರ ಹಾಗೂ ಹಾಸ್ಯ ರೂಪದಲ್ಲಿ ಕೂಡಾ ಓದುಗರ ಮನಸ್ಸನ್ನು ತಟ್ಟಬೇಕು. ಬೌದ್ಧಿಕ ಹಾಗೂ ತಾತ್ವಿಕ ವಿಚಾರಗಳನ್ನು ವಾಸ್ತವ ನೆಲೆಯಲ್ಲಿ ಚಿಕ್ಕದಾಗಿ ರಚಿಸುವ ತಾಕತ್ತು ಹನಿಗವಿತೆಗೆ ಇದೆ ಎಂದು ಹೇಳಿದರು.
ಸಾಹಿತಿ ಬಿ.ಶಿವಶಂಕರ್ ಮಾತನಾಡಿ, ಬದುಕಿನ ಅನೇಕ ಮಗ್ಗಲುಗಳನ್ನು ಗಮನಿಸಿ ಹನಿಗವಿತೆ ರಚಿಸಬೇಕು. ಹನಿಗವಿತೆ ಬರೆಯುವುದು ಸುಲಭದ ಮಾತಲ್ಲ. ಅಧ್ಯಯನದ ಜತೆಗೆ ಪದಗಳ ಜೋಡಣೆಗಳಲ್ಲಿ ಕವಿಯ ಪ್ರತಿಭೆ ಅನಾವರಣಗೊಳ್ಳಬೇಕು ಎಂದರು.
ನಿವೃತ್ತ ಶಿಕ್ಷಕ ಯೋಗಪ್ಪ, ಗುತ್ತಿಗೆದಾರರಾದ ರಮೇಶ್ ಶೂನ್ಯ, ಈಶ್ವರಪ್ಪ, ಮಣಿಕಂಠ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ,ನಿವೃತ್ತ ಶಿಕ್ಷಕ ದೇವಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net