

ವಿಜಯವಾಣಿ ಸುದ್ದಿಜಾಲ ಧಾರವಾಡ
ಯುವ ಜನತೆಗೆ ಸಮಾಜದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಆದರೆ, ನಿರ್ಲಕ್ಷ, ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಹಾಗೂ ಅನೂಕೂಲಕರ ವಾತಾವರಣ ಅಪೇಕ್ಷಿಸುವ ಯುವ ಜನತೆ ಉದ್ಯೋಗಗಳಿಂದ ವಂಚಿತಾರುಗುತ್ತಿದ್ದಾರೆ. ಕೆಲಸದಲ್ಲಿ ಆಸಕ್ತಿ, ಶ್ರದ್ಧೆ ಮತ್ತು ಸಾಧಿಸುವ ಛಲವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಜೆಎಸ್ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್ಎಸ್ ಕಾಲೇಜು ಆವರಣದಲ್ಲಿ ಬೆಂಗಳೂರಿನ ಡೆವೆಲಪ್ ಹಾಗೂ ಜನತಾ ಶಿಕ್ಷಣ ಸಮಿತಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ ಉದ್ಯೋಗಮೇಳ ಡೆವೆಲಪ್ ಉದ್ಯಮ-2025 ಉದ್ಘಾಟಿಸಿ ಅವರು ಮಾತನಾಡಿದರು.
ಜೆಎಸ್ಎಸ್ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಕಾಳಜಿಯೊಂದಿಗೆ ಸಾಮಾಜಿಕ ಜವಾಬ್ದಾರಿ ಸಹ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಜತೆಗೆ ಕೌಶಲ್ಯಾಭಿವೃದ್ಧಿಗೂ ಆದ್ಯತೆ ನೀಡಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ಈ ಸಂದರ್ಶನವನ್ನು ಸೀಮಿತಗೊಳಿಸದೆ ಕರ್ನಾಟಕದ ಎಲ್ಲ ಭಾಗದ ವಿದ್ಯಾರ್ಥಿಗಳಿಗೆ ಇದನ್ನು ಮುಕ್ತವಾಗಿರಿಸಿದೆ ಎಂದರು.
ಡೆವೆಲಪ್ ಕಂಪನಿ ಸಿಇಒ ತೇಜಸ್ ಗೌಡ ಮಾತನಾಡಿ, ಬಹಳಷ್ಟು ಕಂಪನಿಗಳಲ್ಲಿ ಕೆಲಸಗಾರರ ಕೊರತೆ ಇದೆ. ನಿರುದ್ಯೋಗಿ ಯುವಕರಿಗೆ ಕೆಲಸದ ಅವಶ್ಯಕತೆ ಇದೆ. ಆದರೆ, ಇಬ್ಬರ ನಡುವೆ ಸರಿಯಾದ ಮಾಹಿತಿ ಹಾಗೂ ಸಂಪರ್ಕದ ಕೊರತೆಯಿಂದ ನಿರುದ್ಯೋಗದ ಮಟ್ಟ ಜಾಸ್ತಿಯಾಗುತ್ತಿದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಕಂಪನಿ ಹಾಗೂ ಉದ್ಯೋಗಾಸಕ್ತರ ಭಾಂಧವ್ಯ ಬೆಸೆಯಲು ಡೆವೆಲಪ್ ಕಂಪನಿ ಸ್ಥಾಪಿಸಲಾಗಿದೆ ಎಂದರು.
ನಿರುದ್ಯೋಗ ಸಮಸ್ಯೆ ಕಡಿಮೆಯಾಗಿಸುವ ಗುರಿ ಹೊಂದಿದೆ. ಇಂದು ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಐಟಿಐ, ಡಿಪ್ಲೊಮಾ, ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 5000ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ. ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುವ ಬದಲು ಕರ್ನಾಟಕದ ವಿವಿಧ ಭಾಗಗಳ ಕಂಪನಿಯವರನ್ನು ಸಂದರ್ಶನಕ್ಕಾಗಿ ಇಲ್ಲಿಗೆ ಕರೆಸಿದ್ದೇವೆ. ಇಷ್ಟವಾದ ಉದ್ಯೋಗ ಆಯ್ದುಕೊಳ್ಳಿ ಎಂದರು.
ಮಹಾವೀರ ಉಪಾಧ್ಯೆ, ಡಾ. ನಾಗಚಂದ್ರ, ಶಿವಪ್ರಸಾದ, ಸೂರಜ್ ಆಲದಕಟ್ಟಿ, ನಿರಂಜನ, ಪಲ್ಲವಿ. ಎಸ್, ಶಿವು ರಾಜನ್, ಇತರರು ಇದ್ದರು. ಸಂಜಯ ಆರ್. ವಂದಿಸಿದರು.