ಹಳ್ಳಿಗಳಲ್ಲಿ ಜಲ ಸಮಸ್ಯೆ ಕಂಡುಬಂದರೆ ಪಿಡಿಒಗಳೇ ಹೊಣೆ

Manvi Meeting
ಮಾನ್ವಿ ತಾಪಂ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಹಂಪಯ್ಯನಾಯಕ ಮಾತನಾಡಿದರು. ಮಾನ್ವಿ ತಹಸೀಲ್ದಾರ್ ರಾಜು ಪಿರಂಗಿ, ಸಿರವಾರ ತಹಸೀಲ್ದಾರ್ ರವಿ ಅಂಗಡಿ ಇದ್ದರು.
Published on

ಮಾನ್ವಿ: ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರು ಹಾಗೂ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಹಂಪಯ್ಯ ನಾಯಕ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಮಾನ್ವಿ ಮತ್ತು ಸಿರವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಹಳ್ಳಿಗಳಲ್ಲಿ ಕುಡಿವ ನೀರಿನ ತೊಂದರೆ ಕಾಣಿಸಿಕೊಂಡಲ್ಲಿ ಪಿಡಿಒಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನಲ್ಲಿ ಎಲ್ಲ ಕುಡಿವ ನೀರಿನ ಕೆರೆಗಳನ್ನು ತುಂಬಿಸಬೇಕು. ತೀವ್ರ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ಪೂರೈಸಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಬೇಕು ಎಂದು ಸೂಚಿಸಿದರು.

ಪಶು ಇಲಾಖೆ ಮೇವಿನ ಲಭ್ಯತೆ, ಕೊರತೆ ಮಾಹಿತಿ ನೀಡಿದಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತಂದು ಮೇವು ಖರೀದಿಗೆ ಕ್ರಮ ಕೈಗೊಳ್ಳಲಾಗುವುದು. ಅಕಾಲಿಕ ಮಳೆಯಿಂದ ಹಾನಿಯಾಗಿರುವ ಭತ್ತದ ಬೆಳೆ ಸಮೀಕ್ಷೆಯನ್ನು ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಮಾಡಲಾಗುತ್ತಿದ್ದು, ಕೂಡಲೇ ವರದಿ ಸಲ್ಲಿಸುವಂತೆ ಸೂಚಿಸಿದರು.

ಮಾನ್ವಿ ತಾಪಂ ಇಒ ಖಾಲೀದ್ ಅಹ್ಮದ್ ಮಾತನಾಡಿ, ಮಾನ್ವಿ ತಾಲೂಕಿನಲ್ಲಿ ಇರುವ 98 ಗ್ರಾಮಗಳಲ್ಲಿ 49 ಹಳ್ಳಿಗಳಿಗೆ ಕುಡಿವ ನೀರಿನ ಕೆರೆ ಮೂಲಕ ನೀರು ಪೂರೈಸಲಾಗುತ್ತಿದೆ. 57 ಗ್ರಾಮಗಳಿಗೆ ಕೊಳವೆಬಾವಿಯಿಂದ ಸರಬರಾಜು ಮಾಡಲಾಗುತ್ತಿದೆ. ಇನ್ನೂ 18 ಕೆರೆಗಳ ಪೈಕಿ 11 ತುಂಬಿಸಿದ್ದು, ನೀರಿನ ಕೊರತೆ ಹೆಚ್ಚಾಗಿರುವ ಗ್ರಾಮಗಳಲ್ಲಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ಪೂರೈಸಲಾಗುವುದು. ಮಾನ್ವಿ ಪಟ್ಟಣಕ್ಕೆ ನೀರು ಪೂರೈಸುವ ರಬ್ಬಣಕಲ್ ಕೆರೆಯು 6.5 ಮೀಟರ್ ತುಂಬಿದ್ದು, ಪೂರ್ತಿ ಭರ್ತಿ (9.5 ಮೀ.)ಗೆ ಕ್ರಮ ಕೈಗೊಳಲಾಗುವುದು ಎಂದು ಮಾಹಿತಿ ನೀಡಿದರು.

ಸಿರವಾರ ತಾಪಂ ಇಒ ಶಶಿಧರಸ್ವಾಮಿ ಮಾತನಾಡಿ, ಸಿರವಾರ ತಾಲೂಕಿನಲ್ಲಿ 44 ಕುಡಿವ ನೀರಿನ ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. 11 ಗ್ರಾಮಗಳಲ್ಲಿ ಜಲ ಸಮಸ್ಯೆ ಇದ್ದು, ಅಗತ್ಯ ಮುಂಜಾಗ್ರತೆವಹಿಸಲಾಗುವುದು ಎಂದು ತಿಳಿಸಿದರು.

ಮಾನ್ವಿ ತಹಸೀಲ್ದಾರ್ ರಾಜು ಪಿರಂಗಿ, ಸಿರವಾರ ತಹಸೀಲ್ದಾರ್ ರವಿ ಅಂಗಡಿ, ಪಿಎಸ್‌ಐ ವೀರನಗೌಡ, ಮಾನ್ವಿ ಪುರಸಭೆ ಜೆಇ ಚೇತನ, ಸಿರವಾರ ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಕವಿತಾಳ ಪಪಂ ಮುಖ್ಯಾಧಿಕಾರಿ ಜಗನ್ನಾಥ, ಪಶು ಇಲಾಖೆ ಎಡಿಗಳಾದ ಬಸವರಾಜ, ರಾಜು ಕಂಬಾಳೆ ಹಾಗೂ ಪಿಡಿಒಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net