

ಕೊಪ್ಪ: ಹುಚ್ಚುರಾಯರ ಕೆರೆ ಲೇಔಟ್ ನಿರ್ಮಾಣದ ಬಗ್ಗೆ ಬಿಜೆಪಿ ಪ್ರತಿಭಟನೆ ಮಾಡುವಾಗ ರಾಜೇಗೌಡ ಅವರನ್ನು ನಿಂದಿಸಿದ್ದಾರೆ. ಲೇಔಟ್ ನಿರ್ಮಾಣದಲ್ಲಿ ರಾಜೇಗೌಡರು ಪಾಲುದಾರರಾಗಿದ್ದರೆ ಜೀವರಾಜ್ ಅವರು ದಾಖಲೆ ಬಿಡುಗಡೆ ಮಾಡಲಿ. ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಸವಾಲು ಹಾಕಿದರು.
ಪಟ್ಟಣಕ್ಕೆ ನೀರು ಪೂರೈಸುತ್ತಿರುವ ಹುಚ್ಚುರಾಯರ ಕೆರೆ ಹಾಳು ಮಾಡಿದ್ದು, ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರ ಅವಧಿಯಲ್ಲಿ. ಕೆರೆ ಅಭಿವೃದ್ಧಿ ಹೆಸರಿನಲ್ಲಿ 1.4 ಕೋಟಿ ರೂ.ವೆಚ್ಚದಲ್ಲಿ ದಿನೇಶ್ ಅವರೇ ಗುತ್ತಿಗೆದಾರರಾಗಿ ಕಾಮಗಾರಿ ನಡೆಸಿ ಕೆರೆ ಹಾಳು ಮಾಡಿದ್ದರು ಎಂದು ದೂರಿದರು.
ಜೀವರಾಜ್ ಕಾಂಗ್ರೆಸ್ ಬಗ್ಗೆಯಾಗಲಿ ಅಥವಾ ಶಾಸಕರಾದ ರಾಜೇಗೌಡ ಅವರ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಸಂಸದ ಕೋಟಶ್ರೀ ನಿವಾಸ ಪೂಜಾರಿ ಅವರು ಇದನ್ನೇ ಹೇಳಿದ್ದಾರೆ. ಲೇಔಟ್ ನಿಂದ ಕೆರೆಗೆ ಹಾನಿಯಾದರೆ ಲೇಔಟ್ ತಡೆಗೆ ಬದ್ದ ಎಂದು ಹೇಳಿದ್ದಾರೆ. ಕ್ಷೇತ್ರದ ಶಾಸಕರು ಕೂಡ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಈಗಲೂ ಕೆರೆ ಸಮೀಪ ನಿರ್ಮಾಣ ಮಾಡುತ್ತಿರುವ ಲೇಔಟ್ನಿಂದ ಯಾವುದೇ ಕೊಳಚೆ ನೀರು ಹಿರೇಕೆರೆಗೆ ಹೋಗಿ ಸೇರುವ ಸಂಭವ ಇದೆ ಎಂದಾದಲ್ಲಿ ನಾವು ಅದರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಲು ಬದ್ದವಾಗಿದ್ದೇವೆ. ಖಾಸಗಿ ಲೇಔಟ್ ನಿರ್ಮಾಣ ಮಾಡುವವರು ಎಲ್ಲ ಸೂಕ್ತ ದಾಖಲಾತಿಗಳನ್ನು ತಯಾರಿಸಿ ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಪಕ್ಷದ ಮುಖಂಡರಾದ ಮಿತ್ರಾ ಕೊಡ್ತಾಳ್, ನಾಗೇಶ್ ಅಮೀನ್, ಪ್ರಕಾಶ್ ಪೂಜಾರಿ, ನವೀನ್ ಮಾವಿನಕಟ್ಟೆ, ಸಂದೇಶ್, ಸಂತೋಷ್ ಕುಲಾಸೋ ಮತ್ತಿತರರು ಇದ್ದರು.