ಮತಿಬೇಧವಿದ್ದಲ್ಲಿ ಮತ ಬೇಧ

special lecture
Published on

ಸಿದ್ದಾಪುರ: ಮತಿ ಬೇಧವಿದ್ದಲ್ಲಿ ಮತ ಬೇಧವಿರುತ್ತದೆ. ಮತಿಗೆ ಮೂಲವಾದ ಶೃತಿಗೆ ಅಪಚಾರವನ್ನು ನಮ್ಮ ಧರ್ಮ ಮಾಡಿಲ್ಲ. ಅದ್ವೈತ, ದ್ವೈತ, ವಿಶಿಷ್ಠಾದ್ವೈತ ಮುಂತಾದವು ಬೇರೆ ಬೇರೆ ಹಾದಿಗಳಲ್ಲಿ ಗುರಿ ಸೇರುವದಕ್ಕೆ ಸನಾತನದ ವ್ಯವಸ್ಥೆ. ಅವೆಲ್ಲ ಸಮಗ್ರವಾಗಿ ಭಾಗವತದಲ್ಲಿ ಅಡಕಗೊಂಡಿದೆ ಎಂದು ವಿದ್ವಾಂಸ, ನಿವೃತ್ತ ಪ್ರಾಚಾರ್ಯ ವಿ. ಗಂಗಾಧರ ಭಟ್ಟ ಅಗ್ಗೆರೆ ಹೇಳಿದರು.

ಪಟ್ಟಣದ ಶಂಕರಮಠದಲ್ಲಿ ಸಂಸ್ಕೃತಿ ಸಂಪದ, ಸುಷಿರ ಸಂಗೀತ ಪರಿವಾರ ಭುವನಗಿರಿ-ಕ್ಲಲಾರೆಮನೆ, ಸಾಕೇತ ಪ್ರತಿಷ್ಠಾನ ಗುಂಜಗೋಡು ಇವುಗಳ ಸಹಯೋಗದಲ್ಲಿ ಚಿಂತಕಿ ಡಾ.ವೀಣಾ ಬನ್ನಂಜೆ ಅವರ ಏಳು ದಿನಗಳ ಶ್ರೀಮದ್ಭಾಗವತ ಉಪನ್ಯಾಸ ಮಾಲಿಕೆಯ ಸಮಾರೋಪದಲ್ಲಿ ಅವರು ಮಾತನಾಡಿದರು.

ಸನಾತನದ ಪರಮ ಪವಿತ್ರ ಗ್ರಂಥ ಭಾಗವತ ಭಾರತದ ಎಲ್ಲವನ್ನೂ ಒಳಗೊಂಡದ್ದು. ಭಾರತದ ಸಾಹಿತ್ಯ,ಸಂಗೀತ,ಶಿಲ್ಪ,ಚಿತ್ರಕಲೆ, ನಾಟ್ಯ, ಎಲ್ಲವೂ ಭಾಗವತದಿಂದ ಪ್ರಭಾವ ಪ್ರೇರಿತವಾದದ್ದು. ಸನಾತನ ನಾಶ ಮಾಡಬೇಕಾದವರು ಇವನ್ನೂ ನಾಶಮಾಡಬೇಕಾಗುತ್ತದೆ. ಹಾಗಾದಾಗ ಭಾರತದಲ್ಲಿ ಏನು ಉಳಿಯುತ್ತದೆ. ಸನಾತನ ನಾಶ ಮಾಡಬೇಕು ಎನ್ನುವದಕ್ಕೆ ಯಾವುದೇ ಬೇಸರ ಬೇಡ. ಅದು ಶಾಶ್ವತವಾದದ್ದು.

ನಮಗೆ ಎಲ್ಲವನ್ನೂ ಕೊಟ್ಟದ್ದು ಭಗವಂತ. ಬಹುದೊಡ್ಡ ಋಣ ನಮ್ಮಮೇಲಿದೆ. ಭಾಗವತವನ್ನು ಓದಿದಾಗ,ಕೇಳಿದಾಗ ಸಕಲ ಋಣ ತೀರಿಸಲು ಸಾಧ್ಯ. ಈ ಕಾರ್ಯಕ್ರಮ ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಬೇಕು. ಶ್ರವಣ,ಮನನ, ನಿಧಿಚೇತನದ ಮೂಲಕ ಅಧ್ಯಯನ ಮಾಡುವದು ಮುಖ್ಯ. ನಮ್ಮ ಭಾಗ್ಯವೆಂದರೆ ಸಂಸ್ಕೃತಿಯ ಪ್ರತಿನಿಧಿಯಾಗಿ, ಸಾಹಿತ್ಯದ ನಿಧಿಯಾಗಿ,ಮೂಲಗ್ರಂಥಗಳನ್ನು ಆವಿಷ್ಕರಿಸಿ,ಮತಗಳ ಗುರುತಿಲ್ಲದಂತೆ ವಿಚಾರಗಳನ್ನು ನಮ್ಮ ಮುಂದಿಟ್ಟವರು ಮೇರುಸದೃಶ ಬನ್ನಂಜೆ ಗೋವಿಂದಾಚಾರ್ಯರು. ತಮ್ಮ ತಂದೆಯಂತೆ ವೀಣಾ ಬನ್ನಂಜೆ ಕೂಡ ಸನಾತನದ ಮಹತ್ವವನ್ನು ಎಲ್ಲೆಡೆ ಪ್ರಚುರಪಡಿಸುತ್ತಿದ್ದಾರೆ. ಅವರಿಂದ ಇನ್ನಷ್ಟು ಪ್ರಚುರಗೊಳ್ಳಲಿ ಎಂದರು.

ಡಾ.ವೀಣಾ ಬನ್ನಂಜೆ ಮಾತನಾಡಿ ಸಿದ್ದಾಪುರ ನನ್ನ ಬದುಕಿನ ಅವಿಭಾಜ್ಯ ಅಂಗವೆನ್ನಿಸುವದರ ಜತೆಗೆ ಸರಿ,ತಪ್ಪುಗಳ ಅನುಸಂಧಾನ ಮಾಡಿಕೊಳ್ಳುವ ಕನ್ನಡಿಯೂ ಆಗಿದೆ.ನನಗೆ ಸಂತೃಪ್ತಿ ಕೊಟ್ಟಿದೆ ಎಂದರು.

ಸಂಸ್ಕೃತಿ ಸಂಪದದ ವಿಜಯ ಹೆಗಡೆ ದೊಡ್ಮನೆ ದಂಪತಿ ವಿ.ಗಂಗಾಧರ ಭಟ್ಟ ಹಾಗೂ ಡಾ.ವೀಣಾ ಬನ್ನಂಜೆ ಅವರನ್ನು ಗೌರವಿಸಿದರು. ನಾರಾಯಣ ಹೆಗಡೆ ಕಲ್ಲಾರೆಮನೆ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net