ಯುವ ಕಲಾವಿದರಿಗೆ ಮಾಸಾಶನ ನೀಡದಿದ್ದರೆ ಕಲೆ ಉಳಿವು ಅಸಾಧ್ಯ

20 ckm 3 (1)
ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಜಾನಪದ ಸಮ್ಮೇಳನದ ಅಂಗವಾಗಿ ಕಲಾ ತಂಡಗಳ ಆಕರ್ಷಕ ಮೆರವಣಿಗೆ ನಡೆಯಿತು.
Published on

ಚಿಕ್ಕಮಗಳೂರು: ಜಾನಪದ ಕಲೆಗಳು ಅವಸಾನದಂಚಿಗೆ ಸಾಗುತ್ತಿದ್ದು, ಯುವ ಕಲಾವಿದರಿಗೂ ಮಾಸಾಶನ ನೀಡಿದಾಗ ಮಾತ್ರ ಯಾವುದೇ ಕಲೆ ಉಳಿಯಲು ಸಾಧ್ಯ ಎಂದು ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಬೆಳವಾಡಿ ಪರಮೇಶ್ವರಪ್ಪ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಜಾನಪದ ಪರಿಷತ್‌ನಿಂದ ಆಯೋಜಿಸಿದ್ದ 4ನೇ ಜಿಲ್ಲಾ ಜಾನಪದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಸರ್ಕಾರ ಕಲಾವಿದರ ಮಾಸಾಶನಕ್ಕೆ ವಯಸ್ಸನ್ನು ಪರಿಗಣಿಸದೆ ಯುವ ಕಲಾವಿದರಿಗೂ ಮಾಸಾಶನ ನೀಡುವ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಾನಪದ ಕಲಾವಿದರಿಗೆ ಮಾಶಾಸನ ನೀಡಲು ರಾಜ್ಯಸರ್ಕಾರ 60 ವರ್ಷ ವಯಸ್ಸು ನಿಗದಿಗೊಳಿಸಿದೆ. ಇದರಿಂದ ವಯೋವೃದ್ಧ ಕಲಾವಿದರು ಮಾತ್ರ ಕಂಡು ಬರುತ್ತಿದ್ದಾರೆ. ಯುವ ಜನತೆ ಕಲೆ ಕಲಿಯಲು ಆಸಕ್ತಿ ತೋರುತ್ತಿಲ್ಲ. ಕಲಾವಿದರಿಗೆ ಮತ್ತು ಕಲೆಗೆ ವಯಸ್ಸಿನ ಹಂಗಿಲ್ಲ. ಕಲೆ ಎಲ್ಲರಿಗೂ ಒಲಿಯುತ್ತದೆ.ಯುವ ಜನತೆಯೂ ಕಲೆಯನ್ನು ಕಲಿತು ಜಾನಪದ ಉಳಿಯುವಂತಾಗಬೇಕು ಎಂದು ಆಶಿಸಿದರು.
ಜಾನಪದ ಸಿರಿ ಪ್ರಶಸ್ತಿ ಸ್ಮರಣಿಕೆ ಬಿಡುಗಡೆಗೊಳಿಸಿ ಕರ್ನಾಟಕ ಜನಪದ ಪರಿಷತ್ ರಾಜ್ಯಾಧ್ಯಕ್ಷ ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ಜಾನಪದ ಮರು ಸೃಷ್ಟಿಯಾಗಬೇಕಿದೆ. ಜಾನಪದ ಕಲಿಯಬೇಕು ಜತೆಗೆ ತಿಳಿಯಬೇಕು. ಹಾಗಾದಾಗ ಮಾತ್ರ ಆ ಕಲೆಗೆ ದೊಡ್ಡಗೌರವ ಬರುವ ಜೊತೆಗೆ ಸಿರಿವಂತಿಕೆಯೂ ಬರುತ್ತದೆ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕ್ರಮಗಳಿಗೆ ನೀಡುವ ರೀತಿಯಲ್ಲಿ ಕರ್ನಾಟಕ ಜಾನಪದ ಪರಿಷತ್‌ನ ಕಾರ್ಯಕ್ರಮಗಳಿಗೂ ಸರ್ಕಾರದಿಂದ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡುವುದಾಗಿ ಭರವಸೆ ನೀಡಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net