ಗೋ ಸಂಪತ್ತು ಮುಗಿದರೆ ಒಕ್ಕಲುತನವೂ ಅಂತ್ಯ

If the wealth of cows ends, loneliness will also end.
ವಿಜಯಪುರ ಹೊರವಲಯದ ತೊರವಿ ಗ್ರಾಮದ ಬಳಿ ಜಾನುವಾರು ಜಾತ್ರೆಯಲ್ಲಿ ಹಮ್ಮಿಕೊಂಡಿದ್ದ ಬಹುಮಾನ ವಿತರಣಾ ಸಮಾರಂಭವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿದರು. ಈರಣ್ಣ ಪಟ್ಣಣಶೆಟ್ಟಿ, ರವೀಂದ್ರ ಬಿಜ್ಜರಗಿ, ಗೋಪಾಲ ಮಹಾರಾಜರು ಮತ್ತಿತರರಿದ್ದಾರೆ.
Published on

ವಿಜಯಪುರ: ಗೋ ಸಂಪತ್ತು ಆವನತಿ ಹಂತಕ್ಕೆ ತಲುಪಿದರೆ ಒಕ್ಕಲುತನವೂ ಮುಗಿದಂತಾಗುತ್ತದೆ. ಈ ಕಳವಳಕಾರಿ ಸಂಗತಿ ರೈತರಿಗೆ ಅರ್ಥವಾಗುತ್ತಿಲ್ಲ. ಇದರಲ್ಲಿ ರೈತರದಷ್ಟೆ ತಪ್ಪಿಲ್ಲ. ಬದಲಾಗಿ ಸರ್ಕಾರದ ನೀತಿಗಳು ತಪ್ಪಿದೆ ಎಂದು ಶಾಸಕ ಬಸನಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದರು.

ನಗರ ಹೊರವಲಯದ ತೊರವಿ ಗ್ರಾಮದ ಬಳಿ ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಜಾನುವಾರು ಜಾತ್ರೆಯಲ್ಲಿ ಬುಧವಾರ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಗಳು ತೊಗರಿಗೆ ನೀಡಿದಂತೆ ಜೋಳಕ್ಕೆ ಹೆಚ್ಚಿನ ಬೆಂಬಲ ಬೆಲೆ ನೀಡಿದರೆ ಜೋಳದ ಬೆಳೆ ಪ್ರಮಾಣ ಹೆಚ್ಚಾಗಿ ಜಾನುವಾರು ಮೇವಿಗೆ ಕಣಕಿ ಹೊಟ್ಟು ಸಿಗಲಿದೆ. ಆಗ ದನಕರುಗಳ ನಿರ್ವಹಣೆಗೆ ನೆರವಾಗಲಿದೆ ಎಂದರು.

ಯಾಂತ್ರಿಕೃತ ಜಗತ್ತಿನಲ್ಲಿ ನಿರ್ವಹಣೆ ಸಮಸ್ಯೆ ಎದುರಾಗಿ ಗೋವುಗಳು, ಎತ್ತುಗಳು ಕಟುಕರ ಪಾಲಾಗುತ್ತಿವೆ. ಹಿಂದೆ ಸಿದ್ಧೇಶ್ವರ ಜಾನುವಾರು ಜಾತ್ರೆ ಬೃಹತ್ ಪ್ರಮಾಣದಲ್ಲಿ ನಡೆಯುತಿತ್ತು, ನೆರೆಯ ಮಹಾರಾಷ್ಟ್ರ, ಆಂಧ್ರ ರಾಜ್ಯಗಳಿಂದಲೂ ಖರೀದಿಗೆ ಬರುತ್ತಿದ್ದರು. 110 ಎಕರೆ ವಿಶಾಲ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಜಾನುವಾರು ಕಾಣುತ್ತಿದ್ದವು. ಸದ್ಯ ಜಾತ್ರೆ ಪರಿಸ್ಥಿತಿ ನೋಡಿದರೆ ಮುಂಬರುವ ವರ್ಷಗಳಲ್ಲಿ ದನದ ಜಾತ್ರೆಯೇ ಬಂದಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದೆ ಮನೆ ಮನೆಯಲ್ಲೂ ಗೋವಿನ ಹಾಲು ಸಿಗುತ್ತಿತ್ತು. ಸದ್ಯ ಹಳ್ಳಿಗಳಲ್ಲಿಯೂ ಪಾಕೆಟ್ ಹಾಲು ಲಗ್ಗೆ ಇಟ್ಟಿದೆ. ಗೋ ಸಂಪತ್ತು ಉಳಿಸದಿದ್ದರೆ ಮುಂದೆ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ. ಪ್ರತಿ ಮನೆಯಲ್ಲಿ ಕನಿಷ್ಠ ಒಂದು ಗೋವು ಆದರೂ ಸಾಕಬೇಕು. ಜಾನುವಾರು ನಿರ್ವಹಣೆ ಸಾಧ್ಯವಾಗದವರು ಕಟುಕರಿಗೆ ನೀಡದೆ, ನಮ್ಮ ಗೋಶಾಲೆಗೆ ನೀಡಿದರೆ ನಾವು ಸಾಕುತ್ತೇವೆ. ಅಲ್ಲದೆ, ನಮ್ಮಲ್ಲಿ ಒಳ್ಳೆಯ ಎತ್ತುಗಳಿವೆ. ಕೃಷಿ ಚಟುವಟಿಕೆಗೆ ಬೇಕೆನ್ನುವವರು ಉಚಿತವಾಗಿ ತೆಗೆದುಕೊಂಡು ಹೋಗಬಹುದು ಎಂದರು.

ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಹೆಚ್ಚಿದಂತೆ ವಿಷಯುಕ್ತ ಧಾನ್ಯಗಳ ಉತ್ಪನ್ನವಾಗುತ್ತಿದೆ. ಅಂಥ ಆಹಾರ ಸೇವನೆಯಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆಯು ಹೆಚ್ಚುತ್ತಿದ್ದು, ಅದರಿಂದ ಮಕ್ತವಾಗಲು ಸಾವಯವ ಕೃಷಿಗೆ ಉತ್ತೇಜನ ನೀಡುವ ಅಗತ್ಯವಿದೆ. ಹೀಗಾಗಿ ಗೋ ಸಾಕಣೆ ಅತ್ಯಗತ್ಯ. ಸಾವಯವ ಕೃಷಿ ಮಾಡುವವರು ನಮ್ಮ ಗೋಶಾಲೆಯಿಂದ ಮಜ್ಜಿಗೆ, ಗೋಮೂತ್ರ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದರು.

ಅತ್ಯುತ್ತಮ ಜಾನುವಾರುಗಳ ಮಾಲೀಕರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಎಂ.ಎಸ್. ರುದ್ರಗೌಡರ, ಸದಾಶಿವ ಗುಡ್ಡೋಡಗಿ, ಗೋಪಾಲ ಮಹಾರಾಜರು, ಈರಣ್ಣ ಪಟ್ಣಣಶೆಟ್ಟಿ, ರವೀಂದ್ರ ಬಿಜ್ಜರಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net