ಹಳ್ಳ ತುಂಬಿದರೆ ಓಡಾಟ ಬಂದ್!

23MDG1
Published on

ಮುಂಡರಗಿ: ತಾಲೂಕಿನ ಬೆಣ್ಣಿಹಳ್ಳಿ-ನಾಗರಹಳ್ಳಿ ಮಾರ್ಗಮಧ್ಯದ ಹಿರೇಹಳ್ಳ ತುಂಬಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದರೆ ಜನರು, ಶಾಲಾ ಮಕ್ಕಳು ಪರದಾಡುವಂತಾಗುತ್ತದೆ.

ಮಳೆಗಾಲದಲ್ಲಿ ಬೆಣ್ಣಿಹಳ್ಳಿ ಸಮೀಪದ ಹಿರೇಹಳ್ಳ ತುಂಬಿ ಹರಿಯುತ್ತದೆ. ಹಾಗೆಯೇ ಸಿಂಗಟಾಲೂರ ಏತ ನೀರಾವರಿ ಮುಖ್ಯಕಾಲುವೆ ಮೂಲಕ ಶಿರೋಳ, ತಾಮ್ರಗುಂಡಿ ಮೊದಲಾದ ಕೆರೆ ತುಂಬಿಸಲಾಗುತ್ತದೆ. ಶಿರೋಳ, ತಾಮ್ರಗುಂಡಿ ಕೆರೆ ತುಂಬಿ ಕೋಡಿ ಬಿದ್ದು ಹೆಚ್ಚುವರಿಯಾಗಿ ಹರಿದು ಬರುವ ನೀರೂ ಇದೇ ಹಳ್ಳದಲ್ಲಿ ಹರಿಯುತ್ತದೆ. ಹಿರೇಹಳ್ಳದಲ್ಲಿ ಹೆಚ್ಚು ನೀರು ಹರಿದರೆ ವಾಹನ ಸವಾರರು ಸಂಚಾರಕ್ಕೆ ಪರದಾಡುತ್ತಾರೆ. ಮಕ್ತುಂಪುರ, ಬೆಣ್ಣಿಹಳ್ಳಿ ಗ್ರಾಮದ 40ಕ್ಕೂ ಹೆಚ್ಚು ಮಕ್ಕಳು ನಾಗರಹಳ್ಳಿ ಪ್ರೌಢಶಾಲೆಗೆ ಇದೇ ಮಾರ್ಗವಾಗಿ ತೆರಳುತ್ತಾರೆ. ಹಳ್ಳ ತುಂಬಿ ಹರಿದರೆ ಅಂದು ಮಕ್ಕಳು ಶಾಲೆಗೆ ರಜೆ ಹಾಕಬೇಕಾಗುತ್ತದೆ. ಸಣ್ಣ ಪ್ರಮಾಣದಲ್ಲಿ ನೀರು ಹರಿದರೆ ಹಳ್ಳ ದಾಟಿ ಹೋಗುವುದಕ್ಕೂ ಮಕ್ಕಳು ಹರಸಾಹಸ ಪಡಬೇಕು.

ಈ ಮಾರ್ಗವಾಗಿ ಜನರು ಹೆಸರೂರ, ಕಕ್ಕೂರ, ನಾಗರಹಳ್ಳಿ, ಬೆಣ್ಣಿಹಳ್ಳಿ, ಕೊರ್ಲಹಳ್ಳಿ ಮೊದಲಾದ ಊರಿಗೆ ತೆರಳುತ್ತಾರೆ. ಈ ಹಳ್ಳಕ್ಕೆ ಸೇತುವೆ ನಿರ್ವಿುಸುವುದು ಅವಶ್ಯವಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇತುವೆ ನಿರ್ವಣಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಬೆಣ್ಣಿಹಳ್ಳಿ- ನಾಗರಹಳ್ಳಿ ಮಾರ್ಗಮಧ್ಯದ ಹಳ್ಳಕ್ಕೆ ಸೇತುವೆ ನಿರ್ವಿುಸುವಂತೆ ಮೂರು ತಿಂಗಳ ಹಿಂದೆಯೆ ತಹಸೀಲ್ದಾರ್​ಗೆ ಮನವಿ ಸಲ್ಲಿಸಲಾಗಿದೆ. ಅವರು ಲೋಕೋಪಯೋಗಿ ಇಲಾಖೆಗೆ ಮಾಹಿತಿ ನೀಡಿರುವ ಕುರಿತು ಹಿಂಬರಹ ಸಹ ನೀಡಿದ್ದಾರೆ. ಆದರೆ, ಈವರೆಗೂ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ.| ಸುರೇಶ ಹಲವಾಗಲಿ

ನಾಗರಹಳ್ಳಿ ಗ್ರಾಮಸ್ಥಬೆಣ್ಣಿಹಳ್ಳಿ-ನಾಗರಹಳ್ಳಿ ಮಾರ್ಗಮಧ್ಯದ ಹಳ್ಳಕ್ಕೆ 1.5 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ವಣಕ್ಕೆ ಕೆಆರ್​ಡಿಸಿಎಲ್​ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ದೊರೆತ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.| ಎ. ರಾಮಮೂರ್ತಿ ಎಇಇ, ಪಿಡಬ್ಲ್ಯುಡಿ

ರಸ್ತೆಯಲ್ಲಿ ಪಾಚಿ

ನೀರು ಹರಿಯುವುದರಿಂದ ರಸ್ತೆ ಪಾಚಿಗಟ್ಟಿದೆ. ಅದರಿಂದ ಅನೇಕ ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಪಾದಚಾರಿಗಳು ಎಚ್ಚರಿಕೆಯಿಂದ ಹಳ್ಳ ದಾಟಬೇಕಾಗಿದೆ. ಕೆಲವೊಮ್ಮೆ ಹೆಚ್ಚು ನೀರು ಹರಿಯುವ ಸಂದರ್ಭದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಸಹ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದೂ ಉಂಟು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net