

ಹುಬ್ಬಳ್ಳಿ: ಜಡ ಹಾಗೂ ಜೀವ ಇರುವ ಎರಡು ವಿಧದಲ್ಲಿ ಪ್ರಪಂಚ ಮಾಡಲ್ಪಟ್ಟಿದೆ. ಸಮೃದ್ಧವಾದ ಈ ನೆಲದಲ್ಲಿ ಪ್ರಾಣಿ, ಪಕ್ಷಿಗಳು ತಮ್ಮ ಪಾಡಿಗೆ ನಿಸರ್ಗದಲ್ಲಿ ಖುಷಿಯಾಗಿವೆ. ಆದರೆ, ಈ ಪ್ರಪಂಚದಲ್ಲಿ ಏನಾದರೂ ಕೆಟ್ಟಿದ್ದರೆ ಅದು ಮನುಷ್ಯನ ಮನಸ್ಸು. ಈ ಮನಸ್ಸು ಕೆಡದಂತೆ ಇಟ್ಟುಕೊಳ್ಳಲು ಜೀವನದ ದೃಷ್ಟಿಕೋನ ಬದಲಾಗಬೇಕು ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿಯ ಎಪಿಎಂಸಿ ಪ್ರಾಂಗಣದಲ್ಲಿರುವ ವ್ಯಾಪಾರಸ್ಥರ ಸಂಘದ ಆವರಣದಲ್ಲಿ ಶುಕ್ರವಾರ ಪೇವರ್ಸ್ ಅಳವಡಿಕೆ, ಹೂದೋಟ ನಿರ್ಮಾಣ ಹಾಗೂ ಗ್ರಿಲ್ ಜೋಡಣೆ ಇತರ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ದೇವರು ನಮಗಾಗಿ ಅದ್ಭುತ ಜಗತ್ತನ್ನು ಸೃಷ್ಟಿಸಿದ್ದಾನೆ. ಅದನ್ನು ಹೇಗಿದೆಯೋ ಹಾಗೇ ಅನುಭವಿಸಬೇಕು. ಇಂತಹ ಭೂಮಿ ಮತ್ತೊಂದಿಲ್ಲ. ಎಲ್ಲರ ಪ್ರಯತ್ನದಿಂದ ಈ ಭೂಮಿಯನ್ನು ಸ್ವರ್ಗ ಮಾಡಬಹುದು. ಇಲ್ಲಿ ಎಲ್ಲರೂ ಸುಖ, ಸಂತೋಷದಿಂದ ಬಾಳಲಿ ಎಂಬುದೇ ಎಲ್ಲ ಜಾತಿ, ಧರ್ಮದ ಸಂತರ ಆಶಯವಾಗಿದೆ ಎಂದರು.
ಎಪಿಎಂಸಿ ಸದಸ್ಯ ಚನ್ನು ಹೊಸಮನಿ, ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಶಂಕ್ರಣ್ಣ ನೇಗಿನಹಾಳ, ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಅಂಕಲಕೋಟಿ, ಎ.ಡಿ. ಹೆಬ್ಬಳ್ಳಿ, ಮಹೇಂದ್ರ ಲದ್ದಡ, ಬಾಲಸಿಂಗ್, ರುಕ್ಮುದ್ದೀನ್ ಧಾರವಾಡ, ಎಪಿಎಂಸಿ ಪದಾಧಿಕಾರಿಗಳು, ವಿವಿಧ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು, ಕಾರ್ವಿುಕರು, ಸಾರ್ವಜನಿಕರು ಪಾಲ್ಗೊಂಡಿದ್ದರು. ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ ಸ್ವಾಗತಿಸಿದರು. ಕೆಎಲ್ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಪ್ರಾಸ್ತಾವಿಕ ಮಾತನಾಡಿದರು.
ಪಂಡಿತ ಬಾಲಚಂದ್ರ ನಾಕೋಡ ಹಾಗೂ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
EndFragment