

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ಕೈಯಲ್ಲಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮೊಬೈಲ್ ಏನಾದರು ಎಸ್‌ಐಟಿ ಕೈಗೆ ನೀಡಿದರೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ರೀತಿಯಲ್ಲಿ ಪ್ರತಾಪ್ ಸಿಂಹ ಸಹ ಜೈಲಿಯಲ್ಲಿ ಇರಬೇಕಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸತ್ ಭದ್ರತಾ ಲೋಪ ಸಂದರ್ಭ ಪ್ರತಾಪ್ ಸಿಂಹ ಅವರ ಮೊಬೈಲ್ ವಶಕ್ಕೆ ಪಡೆಯಲಾಯಿತು. ಆ ಮೊಬೈಲ್‌ನಲ್ಲಿರುವ ವಿಡಿಯೋಗಳನ್ನು ನೋಡಿದ ನಂತರವೇ ಬಿಜೆಪಿ ನಾಯಕರು ಪ್ರತಾಪ್ ಸಿಂಹಗೆ ಲೋಕಸಭಾ ಟಿಕೆಟ್ ನೀಡಬಾರದು ಎಂಬ ನಿರ್ಧಾರ ಕೈಗೊಂಡರು. ಇಂತಹ ಪ್ರತಾಪ್ ಸಿಂಹಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ಮೈಸೂರು ಮಹಾರಾಜರು ನಗರಕ್ಕೆ ಕುಡಿಯುವ ನೀರು, ಪಾರಂಪರಿಕ ಕಟ್ಟಡಗಳು, ಆಸ್ಪತ್ರೆಗಳನ್ನು ನೀಡಿದ್ದಾರೆ. ಅದೇ ರೀತಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಉಂಡವಾಡಿ ಯೋಜನೆಯಡಿ ಕುಡಿಯುವ ನೀರು, 12 ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ಶಾಲಾ, ಕಾಲೇಜು ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರ ಅತಿ ಹೆಚ್ಚು ಅಭಿವೃದ್ಧಿಯನ್ನು ಸಿದ್ದರಾಮಯ್ಯ ಮಾಡಿದ್ದಾರೆ. ನಾವು ನಾಲ್ವಡಿ ಅವರೊಂದಿಗೆ ಹೋಲಿಕೆ ಮಾಡಲು ಬಯಸುವುದಿಲ್ಲ. ಅವರಿಗೆ ರಾಜಪ್ರಭುತ್ವದಲ್ಲಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇತ್ತು. ಆದರೆ, ಹಲವಾರು ಸಮಸ್ಯೆಗಳ ನಡುವೆಯೂ ಮೈಸೂರಿಗೆ ಸಿದ್ದರಾಮಯ್ಯ 3 ಸಾವಿರ ಕೋಟಿ ರೂ. ನೀಡಿದ್ದಾರೆ ಎಂದರು.