

ಭಟ್ಕಳ: ಸಂತ್ರಸ್ತರು ಠಾಣೆಗೆ ಬಂದ ಕೂಡಲೆ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಠಾಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಉತ್ತರ ಕನ್ನಡ ಜಿಲ್ಲಾ ನೂತನ ಎಸ್ಪಿ ಎಂ. ನಾರಾಯಣ ಅವರು ತಾಲೂಕಿನ ಪೊಲೀಸ್ ಅಧಿಕಾರಿಗಳಿಗೆ ಪಾಠ ಮಾಡಿದರು.
ಭಟ್ಕಳ ಶಹರ ಠಾಣೆಯಲ್ಲಿ ಗುರುವಾರ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಮಹಿಳೆಯರು, ಮಕ್ಕಳು ಬಂದಾಗ ಅವರನ್ನು ವಿಶೇಷವಾಗಿ ಪರಿಗಣಿಸಬೇಕು. ಆರೋಪಿಗಳನ್ನು ಕರೆತಂದಾಗ ಅಗತ್ಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಹಿತಿ ಬಂದ ತಕ್ಷಣ ವಿಳಂಬ ಮಾಡದೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಇತ್ತೀಚೆಗೆ ನೂತನ ಕಾನೂನುಗಳು ಜಾರಿಯಾಗಿದ್ದು, ಅದರ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸಾಮಾಜಿಕ ಸೇವೆ, ಜನಸಂಪರ್ಕ ಸಭೆ ಬೀಟ್ಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು, ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು ಎಲ್ಲರಿಗೂ ಮನ್ನಣೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಎಲ್ಲಿಯಾದರೂ ಅವಘಡ, ಅನಾಹುತ ಸಂಭವಿಸಿದರೆ ಪೊಲೀಸರು ಎನ್.ಡಿ ಆರ್.ಎಫ್ ತಂಡದೊಂದಿಗೆ ತಕ್ಷಣಕ್ಕೆ ಸ್ಪಂದಿಸಬೇಕು. ಸುಳ್ಳು ಸುದ್ದಿ ಪ್ರಸಾರ ಮಾಡುವ ಎಲ್ಲ ಮಾಧ್ಯಮಗಳನ್ನು ಬ್ಯಾನ್ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾದ್ಯಂತ ಅನಧಿಕೃತ ಜೂಜಾಟ, ಕ್ಲಬ್ಗಳ ಕುರಿತು ಈಗಾಗಲೆ ಹಲವು ದೂರುಗಳು ಬಂದಿದ್ದು, ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಠಾಣೆಯಲ್ಲಿ ಎಫ್ಐಆರ್ ಮಾಡಿಸಲು ಪದೇಪದೆ ಸುತ್ತಾಡಿಸಬಾರದು. ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ತೇಜೋವಧೆ, ಶಾಂತಿ ಕದಡುವುದು ಕಂಡು ಬಂದರೆ ಗ್ರೂಪ್ನ ಅಡ್ಮಿನ್ ಅವರನ್ನು ಹೊಣೆ ಮಾಡಲಾಗುವುದು. ಶಾಲೆ-ಕಾಲೇಜುಗಳಿಗೆ ತೆರಳಿ ಪೊಲೀಸ್ ಡೇ ಆಚರಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.