ಅವೈಜ್ಞಾನಿಕ ರಸ್ತೆ ಕಾಮಗಾರಿ ಸರಿಪಡಿಸದಿದ್ದರೆ ಹೋರಾಟ

18ark2
module: NormalModule; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 141.0;
Published on

ಅರಕಲಗೂಡು: ತಾಲೂಕಿನಲ್ಲಿ ಹಾದು ಹೋಗಿರುವ ಮಾಗಡಿ- ಸೋಮವಾರಪೇಟೆ ಮಾರ್ಗದಲ್ಲಿ ಕೈಗೊಂಡಿರುವ ಅವೈಜ್ಞಾನಿಕ ರಸ್ತೆ ಅಭಿವೃದ್ಧಿ ಕಾಮಗಾರಿ ಸರಿಪಡಿಸಿ ರೈತರಿಗೆ ಪರಿಹಾರ ಒದಗಿಸದಿದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಎಚ್ಚರಿಸಿದರು.


ತಾಲೂಕಿನ ಸಿದ್ದಾಪುರ ಗೇಟ್‌ನಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಅವೈಜ್ಞಾನಿಕ ರಸ್ತೆ ಕಾಮಗಾರಿ ವಿರೋಧಿಸಿ ಕಳೆದ ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಹಲವು ದಶಕಗಳಿಂದ ಹದಗೆಟ್ಟಿದ್ದ ರಸ್ತೆ ಅಭಿವೃದ್ಧಿ ಭಾಗ್ಯ ಕಾಣುತ್ತಿದೆ. ಆದರೆ ಕೆ-ಶಿಪ್ ಇಂಜಿನಿಯರ್ ನಿರ್ಲಕ್ಷ್ಯ ಧೋರಣೆಯಿಂದಾಗಿ ಕೆಲವು ಕಡೆ ರಸ್ತೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿ ಸಾಗಿದೆ ಎಂದು ಆರೋಪಿಸಿದರು.


ಸಿದ್ದಾಪುರ ಗೇಟ್‌ನಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕುಶಾಲನಗರ ಮಾರ್ಗದ ರಸ್ತೆ ಯಾವುದು ಎಂದು ತಿಳಿಯದೆ ಪ್ರಯಾಣಿಕರು ಸಂಚರಿಸುವಂತಾಗಿದೆ. ಯೋಜನಾಬದ್ಧವಾಗಿ ಕಾಮಗಾರಿ ನಿರ್ವಹಿಸದ ಕಾರಣ ರಸ್ತೆ ಅಪಘಾತಗಳು ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಬಸ್ ನಿಲುಗಡೆ ಸ್ಥಳದಲ್ಲಿ ತಂಗುದಾಣಗಳನ್ನೂ ನಿರ್ಮಿಸಿಲ್ಲ. ರಸ್ತೆ ವಿಸ್ತರಣೆಗೆ ಭೂಮಿ ಕಳೆದಕೊಂಡ ರೈತರಿಗೆ ಸಮರ್ಪಕವಾಗಿ ಪರಿಹಾರವನ್ನೂ ಒದಗಿಸದೆ ಬೇಜವಾಬ್ದಾರಿ ವಹಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಮೇಲಧಿಕಾರಿಗಳನ್ನು ಕರೆಸಿ ಸಮಸ್ಯೆ ಬಗೆಹರಿಸದಿದ್ದರೆ ನಾನೇ ಖುದ್ದು ಹೋರಾಟ ನಡೆಸುವುದಾಗಿ ಗುಡುಗಿದರು.


ಸಿದ್ದಾಪುರ ಗೇಟ್‌ನಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಸ್ಥಳಕ್ಕೆ ಕೆ-ಶಿಪ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವರಾಜ್ ಅವರನ್ನು ಕರೆಸಿ ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ರಸ್ತೆ ಅಭಿವೃದ್ಧಿ ಕಾಮಗಾರಿ ದಾರಿ ತಪ್ಪಲು ಇಂಜಿನಿಯರ್ ಶಿವರಾಜ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.


ಭೂ ಸ್ವಾಧೀನವಾದ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಮೀನಮೇಷ ಎಣಿಸಲಾಗುತ್ತಿದೆ. ವೃದ್ಧರು, ಮಹಿಳೆಯರನ್ನು ಅಲೆದಾಡಿಸಿ ಸತಾಯಿಸಲಾಗುತ್ತಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡು ಆಕ್ರೋಶ ಹೊರಹಾಕಿದರು.


ಮುಖಂಡ ಶ್ರೀಧರ್ ಗೌಡ ಅವರು ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರುತಿ ಅವರಿಗೆ ಮೊಬೈಲ್ ಕರೆ ಮಾಡಿದ ನಂತರ ತಹಸೀಲ್ದಾರ್ ಸೌಮ್ಯಾ ಹಾಗೂ ಕೆ-ಶಿಪ್ ಇಂಜಿನಿಯರ್ ಸುಮಿತ್ರಾ ಅವರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು.


ಕೆ-ಶಿಪ್ ಇಂಜಿನಿಯರ್ ಸುಪ್ರಿಯಾ ಮಾತನಾಡಿ, ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸುವರ್ಣ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ರಾಘವೇಂದ್ರಗೌಡ ಮಾತನಾಡಿ, ಅಧಿಕಾರಿಗಳ ಮನವಿ ಮೇರೆಗೆ ಅಹೋರಾತ್ರಿ ಉಪವಾಸ ಧರಣಿ ನಿಲ್ಲಿಸಲಾಗುವುದು. ಆದರೆ ರೈತರ ಬೇಡಿಕೆಗಳು ಈಡೇರುವ ತನಕ ಪ್ರತಿಭಟನೆ ಮುಂದುವರಿಯಲಿದೆ ಎಂದರು.
ಶ್ರೀಧರ್ ಗೌಡ ಅವರ ಮನವೊಲಿಕೆ ಬಳಿಕ ಅಹೋರಾತ್ರಿ ಉಪವಾಸ ಅಂತ್ಯಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net