ಅವೈಜ್ಞಾನಿಕ ಹಂಪ್ಸ್ ತೆರವುಗೊಳಿಸದಿದ್ದರೆ ಪಾಲಿಕೆ ಕಚೇರಿ ಎದುರು ಪ್ರತಿಭಟನೆ

mcc (3)
Published on

ಮೈಸೂರು: ನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ರಸ್ತೆ ಹಂಪ್ಸ್‌ಗಳನ್ನು ಕೂಡಲೇ ತೆರವುಗೊಳಿಸಬೇಕು, ಇಲ್ಲವಾದಲ್ಲಿ ನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅನ್ವೇಷಣಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಮರ್‌ನಾಥ್ ರಾಜೇ ಅರಸ್ ಎಚ್ಚರಿಸಿದರು.

ಬೋಗಾದಿ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಹಂಪ್ಸ್‌ನಿಂದ ಮೂವರು ಜೀವ ಕಳೆದುಕೊಂಡಿದ್ದಾರೆ. ಹಂಪ್ಸ್‌ಗಳಿಗೆ ಬಿಳಿ ಪಟ್ಟಿ ಬಳಿಯದೆ, ಯಾವುದೇ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಜನರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾ ಯಿತು. ಅವೈಜ್ಞಾನಿಕ ಹಂಪ್ಸ್ ತೆರವಿಗೆ ಒತ್ತಾಯಿಸಿ ಪಾಲಿಕೆ ಕಚೇರಿ ಎದುರು ಪ್ರತಿಭಟನೆಗೆ ನಿರ್ಧರಿಸಿದ್ದೆವು. ಈ ವಿಚಾರ ಅರಿತು ರಾತ್ರೋರಾತ್ರಿ ಹಂಪ್ಸ್‌ಅನ್ನು ತೆರವುಗೊಳಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೋಗಾದಿ ರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ಸ್‌ಗಳನ್ನು ತೆರವುಗೊಳಿಸಿರುವ ಮಾದರಿಯಲ್ಲಿಯೇ ನಗರದ ವಿವಿಧೆಡೆ ನಿರ್ಮಿಸಿರುವ ಅವೈಜ್ಞಾನಿಕ ಹಂಪ್ಸ್‌ಗಳನ್ನು ತೆರವುಗೊಳಿಸುವ ಮೂಲಕ ಜನರ ಜೀವ ಉಳಿಸಲು ನಗರ ಪಾಲಿಕೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ತುಳಿಯಲಾಗುವುದು ಎಂದು ಎಚ್ಚರಿಸಿದರು.

ಅವೈಜ್ಞಾನಿಕ ಹಂಪ್ಸ್‌ನಿಂದ ಅಪಘಾತ ಸಂಭವಿಸಿದ ಮೃತಪಟ್ಟ ನಗರದ ಗೊಲ್ಲಗೇರಿ ನಿವಾಸಿ ಯುವಕ ಯಶ್ವಂತ್ ಅವರ ತಂದೆ ರಾಜೇಂದ್ರ ಪ್ರಸಾದ್ ಮಾತನಾಡಿ, ಯಶ್ವಂತ್ ನಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಿದ್ದ. ಆತನಿಗೆ ಒಂದೂವರೆ ವರ್ಷದ ಮಗು, ಪತ್ನಿ ಇದ್ದಾರೆ. ನನ್ನ ಮಗ ಮೃತಪಡಲು ಪಾಲಿಕೆ ಅಧಿಕಾರಿಗಳು ಅವೈಜ್ಞಾನಿಕವಾಗಿ ನಿರ್ಮಿಸಿದ ಹಂಪ್ಸ್ ಕಾರಣ ಎಂದು ಆರೋಪಿಸಿದರು.

ಅಪಘಾತ ಬಳಿಕ ಸ್ಥಳಕ್ಕೆ ಶಾಸಕರು, ಸಂಸದರು, ಸಚಿವರು ಭೇಟಿ ನೀಡಿ ನಮ್ಮ ಅಳಲನ್ನು ಆಲಿಸಲಿಲ್ಲ. ಪಾಲಿಕೆ ಅಧಿಕಾರಿಗಳು ಸಹ ನಮ್ಮನ್ನು ಭೇಟಿಯಾಗಲಿಲ್ಲ. ಪಾಲಿಕೆ ಅಧಿಕಾರಿಗಳನ್ನು ಅಮಾನತು ಮಾಡಿದರೆ ಸಾಲು ಅವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಯಶ್ವಂತ್ ಸಾವಿನಿಂದ ಆಗಿರುವ ನಷ್ಟವನ್ನು ವೈಯಕ್ತಿಕವಾಗಿ ಅಧಿಕಾರಿಗಳೇ ಭರಿಸಬೇಕು. ಜತೆಗೆ ಯಶ್ವಂತ್‌ನ ಪತ್ನಿಗೆ ಉದ್ಯೋಗ ಕೊಡಿಸಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net