

ಲಿಂಗದಹಳ್ಳಿ: ಮತದಾನ ಮಾಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, 18 ವರ್ಷ ಮೇಲ್ಪಟ್ಟವರೆಲ್ಲರೂ ಮತದಾನದ ದಿನ ಮತಹಾಕಬೇಕು ಎಂದು ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಅಬುಬಕರ್ ಕುಟ್ಟಿ ಹೇಳಿದರು.
ಬಳ್ಳಾವರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಡೆದ ಮತದಾನ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ನಂದಿಬಟ್ಟಲು ಹಾಗೂ ತಿಗಡ ಗ್ರಾಪಂಗಳು ಹಿಂದುಳಿದ ಗ್ರಾಪಂಳಾಗಿದ್ದು ಭದ್ರಾ ಅಭಯಾರಣ್ಯದ ಅಂಚಿನಲ್ಲಿರುವ ಗ್ರಾಪಂಗಳಾಗಿವೆ. ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಹೋಗಲು ವನ್ಯ ಪ್ರಾಣಿಗಳ ಹಾವಳಿಯಿಂದ ಜೀವ ಭಯದಲ್ಲೇ ಸಂಚರಿಸಬೇಕಾಗಿದೆ. ಕುಡಿಯುವ ನೀರನ್ನು ಹರಸಿ ಕಾಡು ಪ್ರಾಣಿಗಳು ಗ್ರಾಮಗಳ ಕಡೆ ಬರುತ್ತಿರುವುದರಿಂದ ಮತದಾನ ಕೇಂದ್ರಗಳಿಗೆ ಗುಂಪು, ಗುಂಪಾಗಿ ಬಂದು ಮತದಾನ ಮಾಡಿ ಸುರಕ್ಷಿತವಾಗಿ ಮರಳಿ ತಮ್ಮ ಗ್ರಾಮಗಳಿಗೆ ತೆರಳುವಂತೆ ಮನವಿ ಮಾಡಿದರು.
ಪಿಡಿಒ ಎನ್.ಎಸ್.ನಾಗರಾಜಪ್ಪ ಸಾರ್ವಜನಿಕರಿಗೆ ಮತದಾನ ಮಾಡುವ ಪ್ರಮಾಣ ವಚನ ಭೋದಿಸಿದರು. ಬಳ್ಳಾವರ ಸರ್ಕಾರಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೋಟೆಕ್ಯಾರಪ್ಪ, ಆರೋಗ್ಯ ನಿರೀಕ್ಷಕ ರಾಮು, ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಅಬುಬಕರ್ ಕುಟ್ಟಿ, ಸದಸ್ಯರಾದ ಎನ್.ಎ.ಕೃಷ್ಣನಾಯ್ಕ, ಸಿಬ್ಬಂದಿ ಎನ್.ರವಿ, ಆರ್.ರಾಜೇಶ್ ಇದ್ದರು.