

ಚಿಕ್ಕಮಗಳೂರು: ವಿಪರೀತ ತಾಪಮಾನ ಏರಿಕೆಯಿಂದ ಹಸಿರು ಕವಚ ಕಣ್ಮರೆಯಾಗುತ್ತಿದ್ದು, ಮಾನವನ ದುರಾಸೆಯಿಂದ ಮರ-ಗಿಡಗಳನ್ನು ಕಳೆದುಕೊಂಡರೆ ಜೀವ ಸಂಕುಲಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಎಂದು ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.
ನಗರದ ಸ್ಕೌಟ್ಸ್ ಭವನದಲ್ಲಿ ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ದಂಟರಮಕ್ಕಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಾನವನ ಅಗತ್ಯತೆಗಿಂತ ಹೆಚ್ಚು ಪರಿಸರ ಹಾಳುಮಾಡಿದರೆ ಸಮಸ್ತ ಜೀವರಾಶಿಗಳು ಬದುಕಲಾರದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
ಮೌಲ್ಯಮಾಪನಾ ಸಮಿತಿಯ ವಿವಿಧ ಕ್ಷೇತ್ರಗಳಲ್ಲಿ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು ಪರಿಸರಕ್ಕೆ ಪೂರಕವಾಗಿರುವ ಚಟುವಟಿಕೆಗಳನ್ನು ನನ್ನ ನೇತೃತ್ವದಲ್ಲಿ ನಡೆಸಲಾಗುವುದು. ರಾಜ್ಯದಲ್ಲಿ ಕೈಗಾರಿಕೋದ್ಯಮ ಹೆಚ್ಚುತ್ತಿರುವುದರಿಂದ ಹಸಿರು ವಾತಾವರಣ ಕಣ್ಮರೆಯಾಗುತ್ತಿದೆ. ಕಾರ್ಬಲ್ ಡೈ ಆಕ್ಸೈಡ್ ಹೆಚ್ಚಳದಿಂದ ಪರಿಸರ ಮಲೀನವಾಗುತ್ತಿದೆ ಎಂದರು.
ದಂಟರಮಕ್ಕಿ ಹಾಗೂ ಆರದವಳ್ಳಿ ಗ್ರಾಮಕ್ಕೆ ಅವಿನಭಾವ ಸಂಬಂಧವಿದೆ. ತಮ್ಮ ತಂದೆ ನಿಂಗೇಗೌಡರು ಕಾಂಗ್ರೆಸ್ ಪಕ್ಷದಲಿದ್ದಾಗ ದಂಟರಮಕ್ಕಿ ಗ್ರಾಮಸ್ಥರು ಹಾಗೂ ಮುಖಂಡರು ಬಹಳಷ್ಟು ಸಹಕಾರ ನೀಡಿದ್ದರು. ಆ ಅಭಿಮಾನ, ವಿಶ್ವಾಸ ಇಂದಿಗೂ ಮುಂದುವರಿಯುತ್ತಿರುವುದು ಖುಷಿಯ ಸಂಗತಿ. ತಂದೆಯ ಮಾರ್ಗದರ್ಶನ, ಜನತೆಯ ಪ್ರೀತಿ ಈ ಸ್ಥಾನಕ್ಕೆ ತಂದಿದೆ ಎಂದು ಹೇಳಿದರು.
ರಾಜಕೀಯ ನನಗೆ ಬಯಸದೇ ಬಂದ ಭಾಗ್ಯ, ಬಾಲ್ಯದಿಂದಲೇ ತಂದೆಯವರೊಂದಿಗೆ ಅಲ್ಲಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತೆರಳುತ್ತಿದ್ದೆ. ಯುವಕಾಂಗ್ರೆಸ್‌ನಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಜತೆಗೆ ಸಾಮಾಜಿಕ ಸಂಘ-ಸಂಸ್ಥೆಗಳಾದ ಸ್ಕೌಟ್ಸ್ ಗೈಡ್ಸ್, ವಿಜ್ಞಾನ ಪರಿಷತ್‌ನಲ್ಲಿ ತೊಡ ಗಿಸಿಕೊಂಡಿರುವುದಕ್ಕೆ ಉನ್ನತ ಹುದ್ದೆ ಅಲಂಕರಿಸಲು ಕಾರಣ ಎಂದರು.
ದಂಟರಮಕ್ಕಿ ಗ್ರಾಮಸ್ಥ ಭದ್ರೇಗೌಡ ಮಾತನಾಡಿ, ರಾಜಕಾರಣದ ಪ್ರಾರಂಭದಿಂದಲೂ ಮಹೇಶ್ ಕಾಂಗ್ರೆಸ್‌ನಲ್ಲೇ ಗುರುತಿಸಿಕೊಂಡು ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದರು. ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿರುವ ಪರಿಣಾಮ ಭಾರತ ಸರ್ಕಾರ ಮೌಲ್ಯಮಾಪನಾ ಸಮಿತಿ ಅಧ್ಯಕ್ಷರಾಗಿ ನೇಮಿಸಿರುವುದೇ ಸಾಕ್ಷಿ ಎಂದು ತಿಳಿಸಿದರು.
ವಕೀಲ ಪುಟ್ಟೇಗೌಡ, ನಗರಸಭಾ ಸದಸ್ಯ ಗುರುಮಲ್ಲಪ್ಪ, ದಂಟರಮಕ್ಕಿ ಗ್ರಾಮಸ್ಥರಾದ ದೊಡ್ಡರಂಗೇಗೌಡ, ಸೋಮಣ್ಣ, ನಿಂಗಪ್ಪ, ಜಗದೀಶ್, ಕುಮಾರ್, ಪಾಪಣ್ಣಯ್ಯ, ಬಾಲರಾಜ್ ಮತ್ತಿತರರಿದ್ದರು.