

ಶಿಗ್ಗಾಂವಿ: ತಾಲೂಕಿನ ತಡಸ ಗ್ರಾಮದ ಮುಖ್ಯ ರಸ್ತೆ ಕಾಮಗಾರಿ ಕೈಗೊಂಡು ಎರಡು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿದ್ದು, ತಕ್ಷಣವೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ಗಜಪಡೆ ತಾಲೂಕು ಕಾರ್ಯಕರ್ತರು, ಶಿಗ್ಗಾಂವಿ ಪಟ್ಟಣದ ಪಿಡಬ್ಲ್ಯುಡಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ, ಇಂಜಿನಿಯರ್ಗೆ ಮನವಿ ಸಲ್ಲಿಸಿದರು.
ಕರವೇ ಗಜಪಡೆ ತಾಲೂಕಾಧ್ಯಕ್ಷ ಶಂಕರ ಬಡಿಗೇರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. ಗ್ರಾಮದ ಮುಖ್ಯ ರಸ್ತೆ ಅಪೂರ್ಣ ಕಾಮಗಾರಿಯಿಂದಾಗಿ ಜನರ ಸಂಚಾರಕ್ಕೆ ಸಮಸ್ಯೆಯಾಗಿದೆ. ಜತೆಗೆ ಈ ರಸ್ತೆಯುದ್ದಕ್ಕೂ ಫುಟ್ಪಾತ್ ನಿರ್ಮಾಣ ಹಾಗೂ ವಿದ್ಯುತ್ ಕಾಮಗಾರಿಗಳು ಕಿರಿಕಿರಿ ಉಂಟು ಮಾಡುತ್ತಿವೆ. ಈ ರಸ್ತೆಯಲ್ಲಿ ಸಣ್ಣ-ಪುಟ್ಟ ಅಪಘಾತಗಳು ನಡೆಯುತ್ತಿದ್ದು ಅನೇಕರು ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ರಸ್ತೆ ಕಾಮಗಾರಿ 15 ದಿನಗಳಲ್ಲಿ ಪೂರ್ಣಗೊಳಿಸದಿದ್ದರೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿದ ಇಂಜಿನಿಯರ್ ಸಿ.ಯು. ಹರ್ಲಾಪುರ ಅವರು, ಈಗಾಗಲೇ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಮತ್ತೊಮ್ಮೆ ಸೂಚಿಸಿ ತಕ್ಷಣ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಶಂಕರ ಬಡಿಗೇರ, ಯಲ್ಲಪ್ಪ ಮರಾಠೆ, ಪ್ರಕಾಶ ಪರಪ್ಪಗೌಡ್ರ, ಯೂಸೂಫ್ ಸೈಕಲಗಾರ, ಗೀತಾಬಾಯಿ ಲಮಾಣಿ, ಪವಿತ್ರ ಮೂಡಿ, ರೇಶ್ಮಾ ಬೀರಬ್ಬಿ, ಪೂರ್ಣಿಮಾ ಚಿತ್ರಗಾರ, ಗಂಗಾಧರಯ್ಯ ಪಾಟೀಲ, ರಾಜೇಸಾಬ್ ಮಾನೇಗಾರ, ವಾಗೇಶ ಎಮ್ಮೆ, ರೇವಣಸಿದ್ದಯ್ಯ ಹಿರೇಮಠ, ಮಹಾವೀರ ಹಳ್ಳಿಯವರ, ಮಹ್ಮದರಫೀಕ್ ಇಂಗಳಗಿ, ಮಂಜು ಜೇನರ, ಸಂತೋಷ ಮತ್ತಿಹಳ್ಳಿ, ಚನ್ನವೀರ ಎಣ್ಣಿಯವರ, ಅನೀಲ ಮಾವುಕರ, ಶ್ರೀಕಾಂತ ಚೂರಿ ಇತರರಿದ್ದರು.