

ಹಾಸನ : ಆಧುನಿಕ ಸಂಪತ್ತಿನ ಜೀವನ ಶೈಲಿಗೆ ಮಾರುಹೋಗಿ ಪರಮಾತ್ಮನನ್ನು ಸ್ಮರಿಸದಿದ್ದರೆ ಮನುಕುಲ ಬಹುದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.
ಅರಕಲಗೂಡು ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಆದಿಚುಂಚನಗಿರಿ ಮಠದ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಆರಂಭದಲ್ಲಿ ಕೊಳೆಯ ಬಟ್ಟೆಯ ಮೇಲೆ ಶುದ್ಧ ನೀರು ಹಾಕಿದರೂ ಕೊಳೆ ನೀರು ಹೇಗೆ ಹೊರಬರುತ್ತದೋ ಹಾಗೆಯೇ ಮೊದಲು ಧ್ಯಾನಕ್ಕೆ ಕುಳಿತಾಗ ಬೇಸರವಾಗುತ್ತದೆ. ಪೂಜೆ ಮಾಡುವಾಗ ಕೋಪ ಬರಬಹುದು ಇದಕ್ಕೆಲ್ಲ ಹೆದರಬಾರದು. ವಿಶ್ವಾಸ ಕಳೆದುಕೊಳ್ಳದೆ ದೈವಸೇವೆ ಮಾಡಿದರೆ ಶುದ್ಧ ಮನಸ್ಸು ನಮ್ಮದಾಗುತ್ತದೆ. ಇಂತಹ ಪ್ರಿತಿ ಬರಲು ಈ ರೀತಿಯ ಕಾರ್ಯಕ್ರಮಗಳು ಪ್ರೇರಣೆಯಾಗಲಿವೆ ಎಂದರು.
ಜಗತ್ತನ್ನು ಸಂಸಾರ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಯಾರಿಗೆ ಚಿಕ್ಕ ಸಂಸಾರದಲ್ಲಿ ಬದುಕುವ ಕಾಲಜ್ಞಾನ ಗೊತ್ತಿರುತ್ತಾದೋ ಅವರು ದೊಡ್ಡ ಸಂಸಾರವನ್ನು ನಡೆಸಬಲ್ಲರು. ನಾವು ತಿನ್ನುವ ಆಹಾರದ ಕಡೆ ನಿಗವಿಲ್ಲದಿದ್ದರೆ ಅದು ಭೋಗದ ಬದುಕಾಗುತ್ತದೆ ಹೊರತು ಯೋಗದ ಬದುಕಾಗುವುದಿಲ್ಲ ಎಂದು ಹೇಳಿದರು.
ಹಲಸಿನ ಹಣ್ಣು ಕುಯ್ಯುವಾಗ ಎಣ್ಣೆಯನ್ನು ಕೈಗಳಿಗೆ ಸವರಿ ಕೊಯ್ದರೆ ಅಂಟುವುದಿಲ್ಲವೋ ಹಾಗೆಯೇ ಜಗತ್ತಿನ ಸಂಸಾರಕ್ಕೆ ಬಂದಮೇಲೆ ಯಾವರೀತಿ ಬದುಕಬೇಕು. ಅದೇ ರೀತಿಯಾಗಿ ಬದುಕಿದ್ದೆಯಾದರೆ ಆ ಬದುಕು ಕೂಡ ತುಂಬಾ ಚೆನ್ನಾಗಿರುತ್ತದೆ. ಈ ಜಗತ್ತು ಪರಮಾತ್ಮನ ಮುಂದುವರಿದ ಸಹಕಾರ ರೂಪ. ದುಡಿದ ಶೇ.10 ರಷ್ಟು ಭಾಗವನ್ನು ಯಾವ ಅಪೇಕ್ಷೆಯನ್ನು ಇಟ್ಟುಕೊಳ್ಳದೆ ಜನಸೇವೆಗೆ ಬಳಕೆ ಮಾಡಬೇಕು ಎಂದರು.
ಹಾಸನ ಮತ್ತು ಕೊಡಗು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಬ್ಬಳಿ ಶ್ರೀ ಶಿವಪುತ್ರ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಬಸವಾಪಟ್ಟಣ ತೋಂಟದಾರ್ಯ ಮಠದ ಶ್ರೀ ಬಸವಲಿಂಗ ಶಿವಯೋಗಿ ಸ್ವಾಮೀಜಿ, ಬಿಜಿಎಸ್ ಕಾಲೇಜು ಪ್ರಾಂಶುಪಾಲ ಮಹೇಶ್ ಹೊಡೆನೂರು ಇತರರಿದ್ದರು.
ಸಂಜೆ ಚಿಕ್ಕಬೊಮ್ಮನಹಳ್ಳಿ ಕ್ಷೇತ್ರಕ್ಕೆ ಆಗಮಿಸಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಕೂರಿಸಿ ಪೂರ್ಣಕುಂಭ ಕಳಸ ಹೊತ್ತು ಮಂಗಳವಾದ್ಯಗಳಿಂದ ಮೆರವಣಿಗೆಯಲ್ಲಿ ಕರೆತರಲಾಯಿತು.