

ಹುಬ್ಬಳ್ಳಿ: ಹುಬ್ಬಳ್ಳಿ ಸೆಂಟ್ರಲ್ ರೌಂಡ್ ಟೇಬಲ್ ಹಾಗೂ ಹುಬ್ಬಳ್ಳಿ ಸೆಂಟ್ರಲ್ ಲೇಡಿಸ್ ಸರ್ಕಲ್ ವತಿಯಿಂದ ಇಲ್ಲಿಯ ಕೇಶ್ವಾಪುರದ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ‘ನೈಟ್ಸ್ ಇನ್ ಖಾಕಿ’ ಕಾರ್ಯಕ್ರಮವನ್ನು ಭಾನುವಾರ ಏರ್ಪಡಿಸಲಾಗಿತ್ತು.
ಪೊಲೀಸ್ ಸಿಬ್ಬಂದಿ ಬಿ.ಪಿ. ಶೆಲವಡಿ, ಕೆ.ಎಸ್. ತಳವಾರ, ನದಾಫ್ ಸಿ.ಎಚ್., ಎಂ.ಎ. ನಿಡುವಣಿ, ಎಸ್.ಎಚ್. ಕೆಂಪೋಡಿ, ಎನ್.ಕೆ. ಸಂದೀಪಕುಮಾರ, ಎಂ.ಬಿ. ವಾಲೀಕಾರ, ವಿ.ಬಿ. ಡುಮ್ಮಣ್ಣವರ, ದುಂಡೇಶ ಮಾಳಿ, ಎಂ.ಎಲ್. ಬಾದಾಮಿ, ಸಿ.ಕೆ. ಲಮಾಣಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸನ್ಮಾನಿಸಿ ಮಾತನಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ನಮ್ಮ ಸಿಬ್ಬಂದಿಯನ್ನು ಕಾಪಾಡುವ ಜವಾಬ್ದಾರಿ ಹಿರಿಯ ಅಧಿಕಾರಿಗಳದ್ದು. ಎಲ್ಲಾದರೂ ಗಲಾಟೆಯಾಗಿ ಕಲ್ಲು ಬಿದ್ದರೆ ನಾವೇ ಮುಂದೆ ನಿಲ್ಲುವುದರಿಂದ ನಮಗೆ ಬೀಳುತ್ತದೆ. ಕೆಳ ಹಂತದ ಸಿಬ್ಬಂದಿಗೆ ಬೀಳಗೊಡುವುದಿಲ್ಲ. ಅಂಥ ಪ್ರಮೇಯ ಬರಲಿಕ್ಕಿಲ್ಲ ಎಂದು ಭಾವಿಸುತ್ತೇನೆ ಎಂದರು.
ರೌಂಡ್ ಟೇಬಲ್‌ನವರು ಶಿಕ್ಷಕರು, ಪೌರಕಾರ್ಮಿಕರು, ವೈದ್ಯಕೀಯ ಕ್ಷೇತ್ರ, ಹೆಸ್ಕಾಂ ಸೇರಿ ಇತರ ಹತ್ತಾರು ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯನ್ನು ಗುರುತಿಸಿ ಗೌರವಿಸಬೇಕು. ನೀವು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಡಿಸಿಪಿಗಳಾದ ಮಹಾನಿಂಗ ನಂದಗಾಂವಿ, ಸಿ.ಆರ್. ರವೀಶ, ಎಸಿಪಿಗಳಾದ ಶಿವಪ್ರಕಾಶ ನಾಯಕ್, ಉಮೇಶ ಚಿಕ್ಕಮಠ, ಹುಬ್ಬಳ್ಳಿ ಸೆಂಟ್ರಲ್ ರೌಂಡ್ ಟೇಬಲ್ ಅಧ್ಯಕ್ಷ ಅರ್ಜುನ ಮಹಾಜನ, ರೌಂಡ್ ಟೇಬಲ್ ಇಂಡಿಯಾ ಅಧ್ಯಕ್ಷ ಚೈತನ್ಯಾದೇವ ಸಿಂಗ್, ಸುದರ್ಶನ ಜಾಧವ್, ವಿಜಯ ವೈದ್ಯ, ವಿಷ್ಣು ಪ್ರಭಾಕರ್, ವಿಶ್ವಾಸ ಜೀವಣ್ಣವರ, ರಾಹುಲ್ ಗಣಪತಿ, ರಾಜು ನವಲೂರ, ಡಾ. ಸಚಿನ್ ಹೊಸಕಟ್ಟಿ, ಇತರರು ಇದ್ದರು. ಶ್ರೀರಕ್ಷಾ ನಿರೂಪಿಸಿದರು.
ಹಾಡು ಹಾಡಿದ ಆಯುಕ್ತರು, ಡಿಸಿಪಿ: ತಮ್ಮದೇ ಪೊಲೀಸ್ ಸಿಬ್ಬಂದಿಗೆ ಸನ್ಮಾನ ಮಾಡುತ್ತಿರುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ‘ಕರ್ನಾಟಕದ ಇತಿಹಾಸದಲಿ’ ಹಾಡು ಹಾಡಿದರೆ, ಇದಕ್ಕೂ ಮೊದಲು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸಿ.ಆರ್. ರವೀಶ ಅವರು ‘ಎಲ್ಲೋ ಹುಟ್ಟು ಎಲ್ಲೋ ಬೆಳೆದು’ ಪದವಾಡಿ ರಂಜಿಸಿದರು. ಇದಕ್ಕೂ ಮೊದಲು ಫೋಟೋ, ವಿಡಿಯೋ ಮಾಡಿಕೊಳ್ಳದಂತೆ ಸಭಿಕರಿಗೆ ವಿನಂತಿಸಲಾಗಿತ್ತು.