ಹಾಡು ಬಂದರೆ ಹಾಡು.. ಬರದಿದ್ದರೆ ಕುಂತು ಕೇಳು

JANAPADA
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಗುರುವಾರ ಜರುಗಿದ ವಿಶ್ವ ಜಾನಪದ ದಿನಾಚರಣೆಯನ್ನು ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಉದ್ಘಾಟಿಸಿದರು. ಶಹಜಹಾನ್ ಮುದಕವಿ, ಡಾ.ವೆಂಕನಗೌಡ ಪಾಟೀಲ, ಡಾ.ಚಂದ್ರಪ್ಪ ಸೊಬಟಿ ಇತರರಿದ್ದರು.
Published on

ಶಿಗ್ಗಾಂವಿ: ಭೌತಿಕ ಹಾಗೂ ಬೌದ್ಧಿಕ ವಿಕಾಸದ ಹಿನ್ನೆಲೆಯಲ್ಲಿ ನಮ್ಮನ್ನು ತಿದ್ದಿಕೊಳ್ಳುವಂತೆ ಸಾಹಿತ್ಯ ರಚಿಸಿ ಹಾಡಿದವರು ನಮ್ಮ ಜನಪದರು. ಹಾಡು ಹೇಗೆ ಹೇಳುತ್ತಿದ್ದಾರೆ ಎನ್ನುವುದು ಮುಖ್ಯವೇ ಹೊರತು ಅವರ ವೇಷಭೂಷಣ ಮುಖ್ಯವಲ್ಲ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ ಭಾಸ್ಕರ್ ಹೇಳಿದರು.

ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ವಿಶ್ವ ಜಾನಪದ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ‘ಹಾಡು ಬರೆಯುವುದು ಮತ್ತು ಅದಕ್ಕೆ ತಕ್ಕಂತೆ ಸಂಕಥನ ತುಂಬುವುದು ಬಹಳ ಮಹತ್ವದ್ದು, ಹಾಡು ಬಂದರೆ ಹಾಡು.. ಬರದಿದ್ದರೆ ಕುಂತು ಕೇಳು ಎನ್ನುವುದನ್ನು ಜನಪದರು ಹೇಳಿದ್ದಾರೆ. ಈ ಮೂಲಕ ಅವರು ಸಮಾಜಕ್ಕೆ ಮೌಲಿಕ ಸಂದೇಶ ಸಾರಿದ್ದಾರೆ’ ಎಂದರು.

ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ ಮಾತನಾಡಿ, ವಿಶ್ವದಾದ್ಯಂತ ಶಾಲಾ ಕಾಲೇಜುಗಳು ಸಂಘ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ವಿಶ್ವ ಜಾನಪದ ದಿನ ಆಚರಿಸುತ್ತಿದ್ದಾರೆ. ಜಾನಪದ ವಿಶ್ವವಿದ್ಯಾಲಯ ಕಲೆಗಳಿಗಾಗಿ, ಕಲಾವಿದರಿಗಾಗಿ ಇರುವ ಪ್ರಪಂಚದ ಏಕೈಕ ವಿಶ್ವವಿದ್ಯಾಲಯ ಇದಾಗಿದೆ. ಇಲ್ಲಿ ಕಲೆಯನ್ನು ತರಬೇತಿ ನೀಡುವ, ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸಗಳಾಗುತ್ತಿವೆ. ಕಲಾವಿದರು ಬಂದು ಇಲ್ಲಿನ ಜಾನಪದ ಬಂಡಾರವನ್ನು ತಿಳಿದುಕೊಂಡು ಮುನ್ನಡೆಯಬೇಕು ಎಂದರು.

ಮೌಲ್ಯಮಾಪನ ಕುಲಸಚಿವ ಪ್ರೊ ಎನ್.ಎಂ. ಸಾಲಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹನುಮಂತಪ್ಪ ತಿಮ್ಮಾಪೂರ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹನುಮಂತಪ್ಪ ಧಾರವಾಡ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫಕೀರೇಶ ಮಾಸ್ತರ ಕೊಂಡಾಯಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ.ವೆಂಕನಗೌಡ ಪಾಟೀಲ ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಪ್ಪ ಸೊಬಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮೀ ಗೇಟಿಯವರ ಜನಪದ ಗೀತೆ ಹೇಳಿದರು.

ಶಿವಮೂರ್ತಪ್ಪ ಹಂಚಿನಮನಿ ಹಾಗೂ ತಂಡದವರು ಚೌಡಕಿ ಪದ ಹಾಡಿದರು, ವಿಜಯಲಕ್ಷ್ಮೀ ಗೊಟಗೋಡಿ ಸೋಬಾನೆ ಪದ ಹಾಡಿದರು. ನವಾಬಸಾಬ್ ಬೆಳಗಲಿ ಅವರಿಂದ ಕರಡಿ ಮಜಲು, ಕಜಾವಿವಿ ಜನಪದ ಕಲೆ ವಿಭಾಗದ ಮಂಜುನಾಥ ಮಠಪತಿ ಹಾಗೂ ತಂಡದವರಿಂದ ವೀರಗಾಸೆ, ಕಜಾವಿವಿ ಶರೀಫ ಮಾಕಪ್ಪನವರ ಹಾಗೂ ತಂಡದವರಿಂದ ಜನಪದ ಗೀತಗಾಯನ ಸೇರಿದಂತೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಡಾ. ಕೆ. ಪ್ರೇಮಕುಮಾರ, ಡಾ.ಮಲ್ಲಿಕಾರ್ಜುನ ಮಾನ್ಪಡೆ, ಶಹಜಹಾನ್ ಮುದಕವಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net