

ಎನ್.ಆರ್.ಪುರ: ರಸ್ತೆ ಹಾಗೂ ಕಿರುಸೇತುವೆ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿ ಮಡಬೂರು ಗ್ರಾಮದ ಕುಪ್ಪೂರು, ಬಟ್ಟೆ ಕೊಡಿಗೆ, ಕೇಸಕ್ಕಿ ಹಾಗೂ ಹೊಸಮನೆ ಗ್ರಾಮಸ್ಥರು ಬುಧವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದರು.
ಕುಪ್ಪೂರು, ಬಟ್ಟೆ ಕೊಡಿಗೆ, ಕೇಸಕ್ಕಿ, ಹೊಸಮನೆಯಲ್ಲಿ 90 ಮನೆಗಳಿವೆ. ಮುಖ್ಯರಸ್ತೆಗೆ ಬರಲು ಇರುವ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ತುಂಬ ಹೊಂಡ, ಗುಂಡಿಗಳಿದ್ದು ಸಂಚಾರ ಕಷ್ಟ. ಗ್ರಾಮಗಳಿಂದ ಮಡಬೂರು ಬಸ್ ನಿಲ್ದಾಣಕ್ಕೆ ಸಂಪರ್ಕ ಮಾಡಲು ಇದ್ದ ಕವಲದ ಹಳ್ಳದ ಕಿರುಸೇತುವೆ 3 ವರ್ಷದ ಹಿಂದೆ ಭಾರಿ ಮಳೆಯಿಂದ ಕೊಚ್ಚಿಹೋಗಿದೆ. ಇದರಿಂದಾಗಿ ಮಡಬೂರು ಬಸ್ ನಿಲ್ದಾಣಕ್ಕೆ ಹೋಗಲು ಸಾಧ್ಯವಿಲ್ಲ. ಕಾಲುಸಂಕ ಕೊಚ್ಚಿಕೊಂಡುಹೋದಾಗ ಎಲ್ಲ ಜನಪ್ರತಿನಿಧಿಗಳು ಭೇಟಿ ನೀಡಿದ್ದರು. ಆದರೆ ಸೇತುವೆ ನಿರ್ಮಿಸಿಕೊಟ್ಟಿಲ್ಲ. ಆಂಬುಲೆನ್ಸ್ ಹಾಗೂ ದೊಡ್ಡ ವಾಹನ ಹೋಗುವಂಥ ಸೇತುವೆ ನಿರ್ಮಿಸಿಕೊಡಿ ಎಂದು ಎಲ್ಲ ಜನಪ್ರತಿನಿಧಿಗಳಿಗೂ ಅರ್ಜಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಂಕರಪುರ-ಮುಡುಬ ರಸ್ತೆಗೆ ಕುಪ್ಪೂರು, ಬಟ್ಟೆಕೊಡಿಗೆಯಿಂದ ಹೋಗಬೇಕಾದರೆ 3 ರಿಂದ 4 ಕಿ.ಮೀ.ದೂರ ಇದ್ದು, ಈ ರಸ್ತೆಯೂ ಸಂಪೂರ್ಣ ಹಾಳಾಗಿದೆ. ರಸ್ತೆಯಲ್ಲಿ ಗುಂಡಿಗಳು ಇರುವುದರಿಂದ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತದೆ. ಆಟೋದವರು ಬರುತ್ತಿಲ್ಲ. ಮಕ್ಕಳು ಶಾಲೆಗೆ ಹೋಗಲು ಕಷ್ಟವಾಗುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ರಸ್ತೆ ಹಾಗೂ ಹೊಸ ಸೇತುವೆ ಮಾಡಿಕೊಡದೆ ಇದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಹೇಳಿದರು.
ಗ್ರಾಮದ ನಿವೃತ್ತ ಯೋಧ ಮೋಹನ ಗೌಡ, ಬಟ್ಟೆಕೊಡಿಗೆ ಮಂಜುನಾಥ್, ಹರೀಶ್, ಅನಿಲ್, ಅವಿನಾಶ್, ಕೇಸಕ್ಕಿ ಹರೀಶ್, ಮನು, ಸಂದೀಪ್, ಬಟ್ಟೆ ಕೊಡಿಗೆ ದೇವೇಂದ್ರ ನಾಯ್ಕ, ದಿನೇಶ್, ಸುಧಾಕರ್, ಕುಪ್ಪೂರು ಮುರ್ಗೇಶ್, ರಾಘವೇಂದ್ರ, ಕನ್ನಮ್ಮ, ಸುಗಂಧ, ಲೀಲಾವತಿ, ಶೋಭಾ, ನಾಗಾನಂದ, ಪ್ರಜ್ವಲ್, ದೀಪಕ್, ಗಣೇಶ, ಲಾವಣ್ಯರಾಜ್, ಸುನೀಲ್, ರಮೇಶ್, ವಿಜಯಾ ಇತರರಿದ್ದರು.