

ಎನ್.ಆರ್.ಪುರ: ಪ್ರಕೃತಿಯ ಸಂಬಂಧ ಕಳೆದುಕೊಂಡರೆ ಮಾನವ ಅಸ್ಮಿತೆ ಕಳೆದುಕೊಂಡಂತೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಕೆ.ಅಣ್ಣಪ್ಪ ಎನ್. ಮಳೀಮಠ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕಸಾಪ ಮಹಿಳಾ ಘಟಕದಿಂದ ಆಯೋಜಿಸಿದ್ದ ಶ್ರಾವಣ ಸಂಭ್ರಮ ಹಾಗೂ ಗೀತ ನೃತ್ಯವೈಭವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ತಾಲೂಕಿನಲ್ಲಿ ಬಹಳಷ್ಟು ಸಾಧಕರಿದ್ದಾರೆ. ಅವರ ಸಾಧನೆಗಳನ್ನು ವಿದ್ಯಾರ್ಥಿಗಳು ಗಮನಿಸಬೇಕು. ಕನ್ನಡ ಎಂದರೆ ಕೇವಲ ಭಾಷೆಯಲ್ಲ. ಮನಸ್ಸು, ಸಂಸ್ಕೃತಿ ಎಲ್ಲವೂ ಆಗಿದೆ. ವಿದ್ಯಾರ್ಥಿಗಳು ಹರಿಯುವ ನೀರಿನಂತಾಗಬೇಕು. ಸೃಜನಶೀಲ, ಕ್ರಿಯಾತ್ಮಕ ಮನಸ್ಸುಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ. ಕೆ.ಉಮೇಶ್ ಮಾತನಾಡಿ, ಶ್ರಾವಣ ಮಾಸ ಬಂದ ಕೂಡಲೇ ಪ್ರಕೃತಿ ಸಹ ಜಡತ್ವ ಕಳೆದುಕೊಂಡು ಅರಳುತ್ತದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ತಾಲೂಕು ಕಸಾಪದಿಂದ ಶ್ರಾವಣ ಮಾಸದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.
ತಾಲೂಕು ಕಸಾಪ ಮಹಿಳಾ ಘಕಟದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ ಮಾತನಾಡಿ, ತಾಲೂಕು ಕಸಾಪ ಮಹಿಳಾ ಘಟಕದಿಂದ ಶ್ರಾವಣ ಸಂಭ್ರಮದ 3ನೇ ಕಾರ್ಯಕ್ರಮ ಮಾಡುತ್ತಿದ್ದೇವೆ. ಶ್ರಾವಣ ಮಾಸವನ್ನು ವರ್ಣಿಸದ ಕವಿಗಳೇ ಇಲ್ಲ. ಕನ್ನಡ ಭಾಷೆ, ಸಂಸ್ಕೃತಿ ಸೇರಿಸಿ ಕನ್ನಡ ಬೆಳೆಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ರಾಗಮಯೂರಿ ಅಕಾಡೆಮಿ ನೃತ್ಯ ಶಾಲೆ ಮುಖ್ಯಸ್ಥೆ ಅಂಕಿತಾ ಪ್ರಜ್ವಲ್ ನಿರ್ದೇಶನದಲ್ಲಿ ಸುನೀತಾ ನೇತೃತ್ವದಲ್ಲಿ ಮಕ್ಕಳಿಂದ ಭರತನಾಟ್ಯ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. ಜಾನಪದ ಗಾಯಕಿ ಡಾಕಮ್ಮ ಪರಮೇಶ್ವರ ಜಾನಪದ ಹಾಡುಗಳನ್ನು ಹಾಡಿದರು.
ಕಸಬಾ ಮಹಿಳಾ ಘಟದ ಹೋಬಳಿ ಅಧ್ಯಕ್ಷೆ ಶರಾವತಿ ಪುಟ್ಟಸ್ವಾಮಿ, ಯಡಗೆರೆ ಲತಾ ಸುಬ್ರಹ್ಮಣ್ಯ, ಜುಬೇದಾ, ಶ್ಯಾಮಲಾ ಸತೀಶ್, ಜಯಮ್ಮ, ಸಿ.ಮ್ಯಾಥ್ಯೂ, ಭಾನುಮತಿ, ವಸಂತಿ, ಸಹನಾ, ಶಶಿಕಲಾ ನಾಗರಾಜ್ ಇದ್ದರು.