ಬೀಜ-ರಸಗೊಬ್ಬರ ಹೆಚ್ಚಿನ ದರ ಪಡೆದರೆ ಲೈಸೆನ್ಸ್ ರದ್ದು

Screenshot_2024-06-01-23-33-08-65.jpg
Published on

ಬೆಳಗಾವಿ: ಮುಂಗಾರು ಹಂಗಾಮು ಬಿತ್ತನೆ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಬೀಜ-ರಸಗೊಬ್ಬರ ದಾಸ್ತಾನು ಲಭ್ಯವಿರುತ್ತದೆ. ರೈತರಿಗೆ ಗುಣಮಟ್ಟದ ಬೀಜ-ರಸಗೊಬ್ಬರವನ್ನು ವಿತರಿಸಬೇಕು. ಕೃತಕ ಅಭಾವ ಸೃಷ್ಟಿಸುವ ಅಥವಾ ನಿಗದಿತ ದರಕ್ಕಿಂತಹ ಹೆಚ್ವಿನ ದರ ಪಡೆಯುವ ವರ್ತಕರು ಮತ್ತು ವಿತರಕರ ಲೈಸೆನ್ಸ್ ರದ್ದುಪಡಿಸಿ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಮುಂಗಾರು ಹಂಗಾಮಿನ ಪೂರ್ವಸಿದ್ಧತೆಗಾಗಿ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಸಗಟು ವ್ಯಾಪಾರಿಗಳ ಮತ್ತು ವಿತರಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಗಾರು ಹಂಗಾಮು ಬಿತ್ತನೆ ಆರಂಭಗೊಂಡಿರುತ್ತದೆ. ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಆಗಮಿಸುತ್ತಿದ್ದಾರೆ.

ಕಳೆದ ವರ್ಷ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಈ ಬಾರಿ ಉತ್ತಮ ಮಳೆಯ ಮುನ್ಸೂಚನೆಯಿದೆ. ಹೆಚ್ಚಿನ ಬಿತ್ತನೆ ಗುರಿ ಕೂಡ ಹೊಂದಲಾಗಿರುತ್ತದೆ. ಆದ್ದರಿಂದ ರೈತರಿಗೆ ಉತ್ತಮ ಗುಣಮಟ್ಟದ ಬೀಜ ವಿತರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿರುತ್ತದೆ.

ದರಪಟ್ಟಿ ಕಡ್ಡಾಯ

ಜಿಲ್ಲೆಯಲ್ಲಿ 185 ಬೀಜ ವಿತರಣಾ ಕೇಂದ್ರ ಆರಂಭಿಸಲಾಗಿರುತ್ತದೆ. ಕೇಂದ್ರಗಳಲ್ಲಿ ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆದುಕೊಂಡರೆ ವರ್ತಕರ ನೋಂದಣಿಯನ್ನು ರದ್ದುಗೊಳಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಚ್ಚರಿಕೆ ನೀಡಿದರು.

ಅದೇ ರೀತಿ ರಸಗೊಬ್ಬರ ಲಭ್ಯತೆ ಹಾಗೂ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಹೆಚ್ಚುವರಿ ಹಣ ಪಡೆದರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಅವರು ಸಭೆ ನಿರ್ವಹಿಸಿದರು. ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಡಾ.ಎಚ್.ಡಿ.ಕೋಳೇಕರ್, ಡಾ.ಕೊಂಗವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net