

ಲಕ್ಷೆ್ಮೕಶ್ವರ: ಪಟ್ಟಣಕ್ಕೆ ಕುಡಿಯುವ ನೀರು ಕಲ್ಪಿಸುವ ಯೋಜನೆಗೆ ಅಳವಡಿಸಿರುವ ಪೈಪಲೈನ್, ಮೋಟರ್ ಪಂಪ್, ಏರ್ವಾಲ್ವ್, ವಿದ್ಯುದ್ದೀಕರಣ ಸೇರಿ ಎಲ್ಲ ಯಂತ್ರೋಪಕರಣಗಳು ಹಾಳಾಗಿದ್ದು, ದುರಸ್ತಿಗಾಗಿ ಕಾದಿವೆ. ಅಲ್ಲದೆ, ನಿರ್ವಹಣೆಯಲ್ಲಿ ನಿರ್ಲಕ್ಷ್ಯನವೂ ಎದ್ದು ಕಾಣುತ್ತಿದೆ. ಇದರಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಕೂಡಲೇ ಸಂಬಂಧಪಟ್ಟ ಪುರಸಭೆ ಹಾಗೂ ತಾಲೂಕಾಡಳಿತ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.
2003ರಲ್ಲಿ ಕಾರ್ಯಗತಗೊಂಡ ತುಂಗಭದ್ರಾ ಕುಡಿಯುವ ನೀರಿನ ಯೋಜನೆಗೆ ಅಳವಡಿಸಿರುವ ಎಲ್ಲಾ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ. ಹತ್ತಾರು ವರ್ಷಗಳಿಂದ ಪೈಪ್ಲೈನ್, ಚಂಬರ್, ವಾಲ್ವಗಳು, ವಿದ್ದುದ್ದೀಕರಣ ದುರಸ್ತಿಗಾಗಿ ಕೋಟ್ಯಂತರ ರೂ. ವ್ಯಯಿಸಿದ್ದರೂ ನದಿಯಲ್ಲಿ ಹೋಮ ಮಾಡಿದಂತಾಗುತ್ತಿದೆ.
ತುಂಗಭದ್ರಾ ನದಿ ತಟದ ಮೇವುಂಡಿ ಜಾಕ್ವೆಲ್ನಲ್ಲಿ ನೀರೆತ್ತಲು ಇರುವ 250 ಎಚ್ಪಿಯ 3 ಪಂಪಸೆಟ್ಗಳಲ್ಲಿ 2 ದುರಸ್ತಿಯಲ್ಲಿವೆ. ಒಂದು ಪಂಪ್ ಮಾತ್ರ ನೀರೆತ್ತುತ್ತಿದೆ. ಇನ್ನೂ ಸೂರಣಗಿ ಬಳಿ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿ ಅಲ್ಲಿಂದ ಪಟ್ಟಣ ಹಾಗೂ 7 ಹಳ್ಳಿಗಳಿಗೆ ಶುದ್ಧ ನೀರು ಸರಬರಾಜು ಮಾಡಲಾಗುತ್ತದೆ. ಆದರೆ, ಶುದ್ಧೀಕರಣ ಘಟಕದಲ್ಲಿ 3 ಪಂಪಸೆಟ್ಗಳಲ್ಲಿ ಒಂದು ಪಂಪ್ ವರ್ಷಗಳ ಹಿಂದೆಯೇ ಕೆಟ್ಟು ನಿಂತಿದೆ. ಮತ್ತೊಂದು ದುರಸ್ತಿಗಾಗಿ ಕಾದಿದೆ. ಇಲ್ಲಿಯೂ ಒಂದೇ ಪಂಪ್ ಕಾರ್ಯ ನಿರ್ವಹಿಸುತ್ತಿದೆ. ಒಂದು ವೇಳೆ ಪಂಪ್ ಕೆಟ್ಟರೆ ಸೋಮೇಶ್ವರನೇ ಗತಿ!.
ಸೂರಣಗಿಯ ಶುದ್ಧೀಕರಣ ಘಟಕದಲ್ಲೂ ಯಂತ್ರೋಪಕರಣಗಳು ಕೆಟ್ಟು ನಿಂತಿವೆ. ಇದರಿಂದಾಗಿ ಒಂದು ತಿಂಗಳಿಂದ ಕಚ್ಚಾ ನೀರೇ ಸರಬರಾಜಾಗುತ್ತಿದೆ. ಅದೂ 15 ದಿನಗಳಿಗೊಮ್ಮೆ. ಘಟಕದ ಆವರಣದೊಳಗೆ ಗಿಡಗಂಟಿಗಳು-ಕಸ ಬೆಳೆದಿದೆ. ಕಾಂಪೌಂಡ್ ಗೋಡೆ ಬಿದ್ದಿದೆ. ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲ, ಸಿಬ್ಬಂದಿ ವಸತಿ ಗೃಹಗಳು ಕಟ್ಟಿದಾಗಿನಿಂದಲೂ ಬಳಕೆಯಾಗದೇ ಹಾಳಾಗಿವೆ.
ಪಟ್ಟಣ ಸೇರಿ 7 ಹಳ್ಳಿಗಳ ಜನರು ತುಂಗಭದ್ರಾ ನದಿ ನೀರನ್ನೇ ನಂಬಿದ್ದಾರೆ. ಹೊಸ ಪೈಪಲೈನ್ ಅಳವಡಿಸುವ ಯೋಜನೆ ಬಗ್ಗೆ ಮೂರ್ನಾಲ್ಕು ವರ್ಷಗಳಿಂದ ಚರ್ಚೆಯಾಗುತ್ತಿದ್ದರೂ ಪ್ರಯೋಜನವಾಗಿಲ್ಲ. ದುರಸ್ತಿಗೆಂದು ಪುರಸಭೆ ವರ್ಷದುದ್ದಕ್ಕೂ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದೆ. ಕೂಡಲೇ ಸಂಬಂಧಪಟ್ಟವರು ಈ ಯೋಜನೆಗೆ ಮರು ಜೀವ ಕಲ್ಪಿಸಲು ಶ್ರಮಿಸಬೇಕು. | ಶಂಕರ ಬಾಳಿಕಾಯಿ ಜೆಡಿಎಸ್ಅಧ್ಯಕ್ಷ, ಶಿರಹಟ್ಟಿ ಮತಕ್ಷೇತ್ರ ನೀರು ಸರಬರಾಜು ಮಾಡುವ ಮೇವುಂಡಿ ಜಾಕ್ವೆಲ್ ಮತ್ತು ಸೂರಣಗಿಯಲ್ಲಿನ ನೀರು ಶುದ್ಧಿಕರಣ ಘಟಕದ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಲಾಗುವುದು. | ವಾಸುದೇವ ಸ್ವಾಮಿ ತಹಸೀಲ್ದಾರ್, ಲಕ್ಷೆ್ಮೕಶ್ವರ ಪಂಪಸೆಟ್ ಮತ್ತು ಯಂತ್ರೋಪಕರಣಗಳ ದುರಸ್ತಿಗೆ ಟೆಂಡರ್ ಕರೆಯಲಾಗಿದೆ. ಗುತ್ತಿಗೆದಾರರ ನಿರ್ಲಕ್ಷ್ಯಂದ ದುರಸ್ತಿ ಕಾರ್ಯ ವಿಳಂಬವಾಗಿದೆ. ಶುದ್ಧ ನೀರು ಸರಬರಾಜಿಗಾಗಿ ಘಟಕದ ಎಲ್ಲ ವಿಭಾಗಗಳನ್ನು ಸ್ವಚ್ಛಗೊಳಿಸಿ ಸುಣ್ಣ-ಬಣ್ಣ ಹಚ್ಚಲಾಗಿದೆ. ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುವುದು. ಹೊಸ ಪೈಪಲೈನ್ ಯೋಜನೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಅನುದಾನ ಮಂಜೂರಾತಿಗೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. | ಮಹೇಶ ಹಡಪದ ಮುಖ್ಯಾಧಿಕಾರಿ, ಲಕ್ಷೆ್ಮೕಶ್ವರ ಪುರಸಭೆ