

ಕೂಡ್ಲಿಗಿ: ಲೋಕಸಭಾ ಚುನಾವಣೆಯಿಂದ ಈವರೆಗೆ ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ವೇಗ ನೀಡಲು, ಸಾರ್ವಜನಿಕರ ಸಮಸ್ಯೆ ಆಲಿಸಲು ಜನಸ್ಪಂದನ ಕಾರ್ಯಕ್ರಮ ಅನುಕೂಲವಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ತಾಲೂಕು ಆಡಳಿತ ಏರ್ಪಡಿಸಿದ್ದ ಜನತಾದರ್ಶನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧಿಕಾರಿಗಳು ಚುನಾವಣಾ ಗುಂಗಿನಿಂದ ಹೊರ ಬಂದು ಸಾರ್ವಜನಿಕ ಕೆಲಸ ಮಾಡಬೇಕು. ಇಲ್ಲಸಲ್ಲದ ನೆಪವೊಡ್ಡಿ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬಾರದು. ಅಂಥ ದೂರುಗಳು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಡಿಸಿ ಎಂ.ಎಸ್.ದಿವಾಕರ ಮಾತನಾಡಿ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದರೆ ಯಾವುದೇ ದೂರುಗಳು ಬರುವುದಿಲ್ಲ. ಆದರೆ ಕೆಲ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣ ಸಮಸ್ಯೆಗಳು ಉದ್ಭವಾಗುತ್ತವೆ. ಆದ್ದರಿಂದ ಸಾರ್ವಜನಿಕರ ಅಹವಾಲು ಅರಿತು ನಿಮ್ಮ ಹಂತದಲ್ಲಿಯೇ ಬಗೆಹರಿಸಿ ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಎಂದು ಸೂಚಿಸಿದರು.
ಸಹಾಯಕ ಆಯುಕ್ತ ಎನ್.ಅಕ್ರಮ್ ಅಲಿ ಷಾ, ಜಿಪಂ ಸಿಇಒ ಸದಾಶಿವ ಪ್ರಭು, ಡಿಎಫ್‌ಒ ಅರ್ಸಲಾನ್, ತಹಸೀಲ್ದಾರ್ ಎಂ.ರೇಣುಕಾ, ತಾಪಂ ಇಒ ವೈ.ರವಿಕುಮಾರ್ ಸೇರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಸೈಕಲ್‌ನಲ್ಲಿ ಡಿಸಿ ಸವಾರಿ: ಪಟ್ಟಣದಲ್ಲಿ ಬೆಳಗ್ಗೆಯೇ ಡಿಸಿ ಎಂ.ಎಸ್.ದಿವಾಕರ ಸೈಕಲ್‌ನಲ್ಲಿ ಸವಾರಿ ಮಾಡಿದರು. ರಾಜೀವ್ ಗಾಂಧಿ ನಗರಕ್ಕೆ ತೆರಳಿ ಜನರ ಸಮಸ್ಯೆ ಆಲಿಸಿದರು. ಬಹುತೇಕರು ಚರಂಡಿ, ಸಾಮೂಹಿಕ ಶೌಚಗೃಹ, ರಸ್ತೆಗಳ ಅವ್ಯವಸ್ಥೆ ಬಗ್ಗೆ ದೂರು ನೀಡಿದರು. ಸ್ಥಳದಲ್ಲಿಯೇ ಇದ್ದ ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್ ಹಾಗೂ ಇಂಜಿನಿಯರ್ ರಾಮಚಂದ್ರ ಗೊಲ್ಲರ ಹಾಗೂ ಇತರ ಅಧಿಕಾರಿಗಳಿಗೆ, ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಡಿಸಿ ಸೂಚನೆ ನೀಡಿದರು. ನಂತರ ಸ್ಥಳಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಆಗಮಿಸಿದರು. ನಂತರ ಡಿಸಿ, ಶಾಸಕ ಸೈಕಲ್‌ನಲ್ಲಿ ಪಟ್ಟಣ ಸುತ್ತಾಡಿದರು. ತಾಲೂಕು ಕಚೇರಿ ಬಳಿ ನಿರುಪಯುಕ್ತ ಕಟ್ಟಡ ನೋಡಿ ವಿವಿಧ ಇಲಾಖೆಗಳ ಬಳಕೆಗೆ ನೀಡಿ ದುರಸ್ತಿಗೆ ಜಿಲ್ಲಾ ಖನಿಜ ನಿಧಿ ಹಣ ಒದಗಿಸುವಂತೆ ಶಾಸಕರಿಗೆ ಡಿಸಿ ಕೋರಿದರು.
179 ಅರ್ಜಿ ಸಲ್ಲಿಕೆ: ಜನಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ 179 ಅರ್ಜಿಗಳು ಸಲ್ಲಿಕೆಯಾದವು. ಸ್ಥಳದಲ್ಲಿ ಏಳು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಉಳಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ತಹಸೀಲ್ದಾರ್ ಎಂ.ರೇಣುಕಾ ತಿಳಿಸಿದರು.