

ಕುಶಾಲನಗರ: ಊರಿನ ಶುಚಿತ್ವದ ಬಗ್ಗೆ ಸಾರ್ವಜನಿಕರು ಜವಬ್ದಾರಿಯುತವಾಗಿ ವರ್ತಿಸಿದರೆ ಊರು ಶುಚಿಯಾಗಿರುತ್ತದೆ ಎಂದು ಕುಶಾಲನಗರ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಸ್.ಆರ್.ಗಣೇಶ್ ತಿಳಿಸಿದರು.
ನಗರದ ಎ.ಪಿ.ಸಿ.ಎಂ.ಎಸ್. ಸಭಾಂಗಣದಲ್ಲಿ ಪ.ಪಂ. ವತಿಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ರವರು ನೀಡಿದ ಸಮಾನತೆಯ ಅಧಿಕಾರದಿಂದ ಪೌರ ಕಾರ್ಮಿಕರೂ ಸಹ ಜನಪ್ರತಿನಿಧಿಗಳೊಂದಿಗೆ ವೇದಿಕೆ ಹಂಚಿಕೊಳ್ಳಬಹುದು. ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಒಂದು ದಿನವೂ ರಜೆ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದೇವೆ. ವರ್ಷವಿಡೀ ಕಾರ್ಯನಿರ್ವಹಿಸುವ ನಾವು ವರ್ಷಕ್ಕೊಂದು ಬಾರಿ ನಡೆಯುವ ಪೌರಕಾರ್ಮಿಕರ ದಿನಾಚರಣೆಗೆ ಕೆಲವು ಪಟ್ಟಣ ಪಂಚಾಯಿತಿ ಸದಸ್ಯರು ಹಾಜರಾಗದೇ ಇರುವುದು ಬೇಸರ ತಂದಿದೆ ಎಂದರು.
ಕೆಲವು ಪೌರ ಕಾರ್ಮಿಕರಿಗೆ ಇನ್ನೂ ಖಾಯಂ ಆಗಿಲ್ಲ. ಸರ್ಕಾರ ಹಲವು ವರ್ಷಗಳಿಂದ ಕಡಿಮೆ ಸಂಬಳಕ್ಕೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಸರ್ಕಾರ ಶೀಘ್ರ ಖಾಯಂ ಗೊಳಿಸಬೇಕೆಂದು ಆಗ್ರಹಿಸಿದರು.
ಪ.ಪಂ.ಅಧ್ಯಕ್ಷ ಜಯವರ್ಧನ ಮಾತನಾಡಿ, ಹಿಂದೆ ವೃತ್ತಿ ಆಧಾರದ ಮೇಲೆ ಜಾತಿ ಪದ್ಧತಿ ಇತ್ತು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂಭ್ರಮ ಸಿಗಲೆಂಬ ಉದ್ದೇಶದಿಂದ ಪೌರ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪೌರ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳನ್ನು ಸಮಯಕ್ಕೆ ಸರಿಯಾಗಿ ನೀಡಲಾಗುತ್ತಿದೆ. ಪೌರ ಕಾರ್ಮಿಕರಿಗೆ ಕ್ಯಾಶ್ ಲೆಸ್ ಜೀವ ವಿಮೆ ಸವಲತ್ತುಗಳನ್ನು ಸರ್ಕಾರ ನೀಡುತ್ತಿದೆ ಅನಾರೋಗ್ಯದಿಂದ ಬಳಲುವ ಪೌರ ಕಾರ್ಮಿಕರು ೩ ಲಕ್ಷದವರೆಗೂ ವೈಧ್ಯಕೀಯ ವೆಚ್ಚ ಸೌಲಭ್ಯವನ್ನು ಪಡೆಯಬಹುದು. ಪೌರಕಾರ್ಮಿಕರಿಗೆ ವಿಶೇಷ ಭತ್ಯೆ ನೀಡಲಾಗುತ್ತಿದೆ. ವಸತಿರಹಿತ ಪೌರ ಕಾರ್ಮಿಕರಿಗೆ ಆದಷ್ಟು ಶೀಘ್ರ ವಸತಿ ಸೌಕರ್ಯ ಕಲ್ಪಿಸಿಕೊಡಲಾಗುವುದು ಎಂದರು.
ದಿನಾಚರಣೆಯ ಪ್ರಯುಕ್ತ ಪೌರಕಾರ್ಮಿಕರಿಗೆ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಪೌರಕಾರ್ಮಿಕರ ಸಂಘದಿಂದ ಪ.ಪಂ.ಅಧ್ಯಕ್ಷ ಜಯವರ್ಧನ ಮತ್ತು ಆರೋಗ್ಯ ನಿರೀಕ್ಷಕ ಉದಯಕುಮಾರ್‌ರನ್ನು ಸನ್ಮಾನಿಸಿದರೆ ಪ.ಪಂ.ವತಿಯಿಂದ ಎಲ್ಲಾ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸುರಯ್ಯಬಾನು ಸದಸ್ಯರುಗಳಾದ ಜಯಲಕ್ಷ್ಮಮ್ಮ, ಜಯಲಕ್ಷ್ಮಿ, ರೇಣುಕಾ ಜಗದೀಶ್, ಎಂ.ವಿ.ನಾರಾಯಣ್, ಶೇಖ್ ಕಲೀಂಮುಲ್ಲ ಖಾನ್, ಸುಂದರೇಶ್, ಸುರೇಶ್, ಡಿ.ಕೆ.ತಿಮ್ಮಪ್ಪ, ಕೆ.ಜಿ.ಮನು, ಶೈಲಾ, ಮೇಸ್ತ್ರಿಗಳಾದ ಮೋಹನ್ ಕುಮಾರ್, ಗಣೇಶ್, ಪೌರ ಕಾರ್ಮಿಕರು ಮತ್ತು ಸಿಬ್ಬಂದಿಗಳು ಸೇರಿದಂತೆ ಇತರರು ಹಾಜರಿದ್ದರು.