

ಗಜೇಂದ್ರಗಡ: ಪ್ರಧಾನಮಂತ್ರಿ ನರೇಂದ್ರ ಮೋದಿ ಮನೆಗೆ ನುಗ್ಗಲು ತಾಕತ್ತಿದ್ದರೆ ದಿನಾಂಕ ನಿಗದಿಪಡಿಸಿ ನಾವು ನಮ್ಮ ಕಾರ್ಯಕರ್ತರೊಂದಿಗೆ ತಯಾರಾಗಿರುತ್ತೇವೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಗುಡುಗಿದರು.
ಗುರುವಾರ ಬಿಜೆಪಿ ರೋಣ ಮಂಡಲದಿಂದ ಶಾಸಕ ಜಿ.ಎಸ್. ಪಾಟೀಲ ಹೇಳಿಕೆ ಖಂಡಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಶಾಸಕರ ಗುಂಡಾಗಿರಿ ಈಗಿನದ್ದಲ್ಲ, ಹಿಂದಿನಿಂದಲೂ ಕ್ಷೇತ್ರದ ಜನರು ನೋಡುತ್ತ ಬಂದಿದ್ದಾರೆ. ಈ ಚುನಾವಣೆಯಲ್ಲಿ ನಾವು ಸೋತಿರಬಹುದು ಆದರೆ, ಸತ್ತಿಲ್ಲ. ನೀವು ಹೇಗೆ ಅಧಿಕಾರ ನಡೆಸುತ್ತೀರಿ ಎಂಬುದನ್ನು ನೋಡುತ್ತಾ ಕುಳಿತಿದ್ದೇವೆ. ಹೊರತು ನಿಮಗೆ ಹೆದರಿ ಕುಳಿತಿಲ್ಲ. ಪ್ರತಿಭಟನೆ ಮಾಡುವುದೇ ನಮ್ಮ ಉದ್ದೇಶವಲ್ಲ ಎಂದರು.
ಶಾಸಕರೇ ಮೊನ್ನೆ ಮಾತನಾಡಿದ ನಿಮ್ಮ ಮಾತನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ. ನಿಮಗೆ ತಾಕತ್ತಿದ್ದರೆ ಮೋದಿ ಮನೆಗೆ ಯಾವಾಗ ನುಗ್ಗುತ್ತಿರಾ, ನಮ್ಮ ಕಾರ್ಯಕರ್ತರ ಮನೆಗೆ ಯಾವಾಗ ನುಗ್ಗುತ್ತೀರಾ ಎಂಬುದನ್ನು ದಿನಾಂಕ ಘೊಷಣೆ ಮಾಡಿ ಎಂದು ಕಿಡಿಕಾರಿದರು.
ಪೊಲೀಸರ ವಿರುದ್ಧ ಕಿಡಿ: ಮೊನ್ನೆಯ ಸಭೆಯಲ್ಲಿ ಶಾಸಕರೊಬ್ಬರು ಪ್ರಧಾನಮಂತ್ರಿ ಬಗ್ಗೆ ಹಗುರವಾಗಿ ಮಾತನಾಡಬೇಕಾದರೆ ಪೊಲೀಸರು ಎಲ್ಲಿ ಹೋಗಿದ್ದರು. ನೀವು ವಿಡಿಯೋ ಮಾಡಿಕೊಂಡು ಸ್ವಯಂ ಪ್ರಕರಣ ದಾಖಲಿಸಿಕೊಳ್ಳಬೇಕಾಗಿತ್ತು. ಅಧಿಕಾರ ಯಾರಿಗೂ ಶಾಶ್ವತವಲ್ಲ. ಸರ್ಕಾರದ ಅಣತಿಯಂತೆ ನಡೆಯಬೇಡಿ. ವಿಧಾನಸಭೆ ಚುನಾವಣೆ ಹತ್ತರದಲ್ಲೇ ಬರಲಿದೆ ನೆನಪಿರಲಿ ಎಂದು ಎಚ್ಚರಿಸಿದರು. ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಗೃಹ ಕಚೇರಿಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಕಾಲಕಾಲೇಶ್ವರ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತು ಕಡಗದ, ಪುರಸಭೆ ಸದಸ್ಯರಾದ ಸುಭಾಸ ಮ್ಯಾಗೇರಿ, ಕನಕಪ್ಪ ಅರಳಿಗಿಡದ, ಸುಜಾತಾಬಾಯಿ ಶಿಂಗ್ರಿ, ಬಿ.ಎಂ. ಸಜ್ಜನರ, ಉಮೇಶ ಮಲ್ಲಾಪೂರ, ಅಮರೇಶ ಬಳಿಗೇರ, ಉಮೇಶ ಪಾಟೀಲ, ಭಾಸ್ಕರಸಾ ರಾಯಬಾಗಿ, ಬಸವರಾಜ ಬಂಕದ, ಸಂತೋಷ ವಸ್ತ್ರದ, ಮಲ್ಲು ಮಾದರ, ಡಿ.ಜಿ. ಕಟ್ಟಿಮನಿ, ಸಿದ್ದಪ್ಪ ಚೋಳಿನ, ರಾಜಕುಮಾರ ಕೋನಣ್ಣವರ ಸೇರಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.