

ರಾಮದುರ್ಗ: ದೇಶದ ಆಸ್ತಿಯಂತಿರುವ ಯುವಕರು ಮನಸ್ಸು ಮಾಡಿದರೆ ಪಕ್ಷ ಸಂಘಟನೆ
ಅಸಾಧ್ಯವಾದ ಮಾತಲ್ಲ. ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸಿದರೆ ಎಲ್ಲ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗುತ್ತದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದ ಮರಾಠ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಯುವಕರು ಮುಂದಿನ ಮುಖಂಡರಾಗಬೇಕಾದರೆ ತಳಮಟ್ಟದಲ್ಲೇ ಗುರುತಿಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪಕ್ಷದ ಗಮನ ಸೆಳೆಯಬೇಕು ಎಂದರು. ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಯುವ ಕಾಂಗ್ರೆಸ್ ಪಡೆ ಸನ್ನದ್ಧವಾಗಿದೆ. ಮಾರ್ಗದರ್ಶನ ಮಾಡಲು ಹಿರಿಯ ಮುಖಂಡರು ಬೆನ್ನಿಗೆ ನಿಂತಿದ್ದಾರೆ. ಯುವಶಕ್ತಿ ಸಾಮರ್ಥ್ಯವನ್ನು ತೊರಿಸುತ್ತೇವೆ ಎಂದರು.
ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅನಿಕೇತ ಪಟ್ಟಣ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ.ರಂಗನಗೌಡ್ರ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರ್ತಿಕ ಪಾಟೀಲ, ವಿಜಯಕುಮಾರ ರಾಠೋಡ, ಮಂಜುಳಾ ದೇವರಡ್ಡಿ, ಸದಾಕತ್‌ಅಲಿ ಮಕಾನದಾರ, ಶಿವಾನಂದ ಹಂಪನ್ನವರ, ಜಹೂರ ಹಾಜಿ, ಚೇತನ ದೇಸಾಯಿ, ಇನಾಯತ್ ಕಲಾದಗಿ ಅನೇಕರಿದ್ದರು. ಬಸವರಾಜ ಪ್ರಧಾನಿ ಸ್ವಾಗತಿಸಿದರು. ರಾಜಶೇಖರ ತೊರಗಲ್ಲ ನಿರೂಪಿಸಿದರು. ರಮೇಶ ಬಂಡಿವಡ್ಡರ ವಂದಿಸಿದರು.