ವಿಪಕ್ಷಗಳು ಒಂದಾದರೆ ಯುಪಿಎ ಅಧಿಕಾರಕ್ಕೆ

Jagadish Shetter
Published on

ಹುಬ್ಬಳ್ಳಿ: ಬಿಹಾರದ ಪಟನಾದಲ್ಲಿ ವಿಪಕ್ಷಗಳು ಪ್ರದರ್ಶಿಸಿದ ಒಗ್ಗಟ್ಟು ಬಿಜೆಪಿ ವಿರುದ್ಧದ ಪೀಠಿಕೆ ಆಗಿದೆ. ಈ ಒಗ್ಗಟ್ಟು ಮುಂದುವರಿದರೆ ಭವಿಷ್ಯದಲ್ಲಿ ಯುಪಿಎ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭವಿಷ್ಯ ನುಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಭಾರತದ ಚುನಾವಣಾ ಇತಿಹಾಸ ನೋಡಿದರೆ, ಕಾಂಗ್ರೆಸ್ ವಿರುದ್ಧ ಎಲ್ಲ ಪಕ್ಷಗಳು ಎಂಬಂತಿತ್ತು. ಈಗ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳು ಎಂಬಂತಿದೆ. ಕಾಂಗ್ರೆಸ್ ನೇತೃತ್ವ ತೆಗೆದುಕೊಂಡು ವಿರೋಧಪಕ್ಷಗಳೆಲ್ಲವೂ ಮುಂದುವರಿದರೆ, ಮುಂದೆ ಯುಪಿಎ ಅಧಿಕಾರಕ್ಕೆ ಬರಲಿದೆ ಎಂದರು.

ಒಂದು ವರ್ಷದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಗ್ಯಾರಂಟಿ ವಿರುದ್ಧ ಮಾತನಾಡಿದವರು, ಈಗ ಬೇಗ ಜಾರಿಗೆ ತನ್ನಿ ಎಂದು ದುಂಬಾಲು ಬಿದ್ದಿದ್ದಾರೆ. ಹೀಗೆ ಮಾಡುವವರು ಕೇಂದ್ರದಿಂದ ಅಕ್ಕಿ ಕೊಡಿಸುವ ಕೆಲಸ ಮಾಡಲಿ ಎಂದು ಬಿಜೆಪಿಯವರ ವಿರುದ್ಧ ಹರಿಹಾಯ್ದರು.

ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅಕ್ಕಿ ಪೂರೈಕೆ ಮಾಡುತ್ತಿಲ್ಲ. ನಮ್ಮ ಖಜಾನೆಯಿಂದ ಹಣ ಭರಿಸುತ್ತೇವೆ, ಅಕ್ಕಿ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಆದರೂ ಬಿಜೆಪಿ ರಾಜಕೀಯ ಮಾಡುತ್ತಿದೆ. ರಾಜಕೀಯ ವ್ಯವಸ್ಥೆಯಲ್ಲಿ ಈ ರೀತಿಯ ನಡವಳಿಕೆ ಒಳ್ಳೆಯದಲ್ಲ. ಯೋಜನೆ ಅನುಷ್ಠಾನ ವಿಳಂಬವಾದಷ್ಟು ಬಿಜೆಪಿ ಹಿನ್ನಡೆ ಅನುಭವಿಸಲಿದೆ. ವಿಧಾನಸಭೆ ಚುನಾವಣೆಯಲ್ಲಿ ಪೆಟ್ಟು ತಿಂದಿರುವ ಬಿಜೆಪಿ ಬದಲಾವಣೆ ಕಂಡುಕೊಂಡಿಲ್ಲ. ಇದೇ ರೀತಿ ಮುಂದುವರಿದರೆ ಕಾಂಗ್ರೆಸ್ ಲೋಕಸಭೆಯಲ್ಲೂ ಗೆಲ್ಲುವ ವಿಶ್ವಾಸವಿದೆ ಎಂದರು.

ಜವಾಬ್ದಾರಿ ನಿಭಾಯಿಸುವೆ: ಕಾಂಗ್ರೆಸ್ ಪಕ್ಷ ಕೊಟ್ಟ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುವೆ. ಗೌರವಯುತವಾಗಿ ಪಕ್ಷ ನಡೆಸಿಕೊಳ್ಳುತ್ತಿದೆ. ನಾನು ಯಾವುದೇ ರೀತಿಯ ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ರಯತ್ನಿಸುವೆ. ಮಾಜಿ ಪ್ರಧಾನಿ ದೇವೇಗೌಡ ಅವರಂಥವರು ರಾಜ್ಯಸಭಾ ಸದಸ್ಯರಾಗಿದ್ದಾರೆ. ನಾನು ಎಂಎಲ್​ಸಿ ಆಗಿದ್ದೇನೆ. ಜನಪರ ಕೆಲಸ ಮಾಡಲು ನನಗೆ ಮತ್ತೆ ವೇದಿಕೆ ಸಿಕ್ಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಎಲ್ಲರಿಗೂ ಗೊತ್ತಿದೆ. ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡದ ಸ್ಥಿತಿಗೆ ಬಂದಿದೆ. ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಕಾಂಗ್ರೆಸ್ ಸೇರುವ ವಿಷಯ ಗೊತ್ತಿಲ್ಲ. ನಾನು ಅವರ ಜತೆಗೆ ಮಾತೂ ಆಡಿಲ್ಲ. ರಾಜ್ಯಾಧ್ಯಕ್ಷ ಸ್ಥಾನ ನೀಡಿ ಎಂದಿರುವ ವಿ. ಸೋಮಣ್ಣ ಅವರ ಹೇಳಿಕೆ ವೈಯಕ್ತಿಕವಾದದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಲೆದಂಡ ಕುರಿತು ನನಗೆ ಮಾಹಿತಿ ಇಲ್ಲ. ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ನನಗೆ ಗೊತ್ತಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net