ಪಾದಯಾತ್ರೆ ಕೈಬಿಡದಿದ್ದರೆ ಅಹಿಂದ ಹೋರಾಟ: ಎಸ್.ಪಿ.ಶೇಷಾದ್ರಿ

Congress leader s.p.Sheshadri
ಅಹಿಂದ ಸಂಘಟನೆ ಉಪಾಧ್ಯಕ್ಷ ಎಸ್.ಪಿ.ಶೇಷಾದ್ರಿ ಮಾತನಾಡಿದರು.
Published on

ಶಿವಮೊಗ್ಗ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈಸೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿರುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅಹಿಂದದಿಂದ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಹಿಂದ ಸಂಘಟನೆ ಉಪಾಧ್ಯಕ್ಷ ಎಸ್.ಪಿ.ಶೇಷಾದ್ರಿ ಎಚ್ಚರಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಸೋತು ಕಂಗಾಲಾಗಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರವಿಲ್ಲದೆ ಹಪಾಹಪಿಸುತ್ತಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣ ಮುಂದಿಟ್ಟುಕೊಂಡು ಸದನದ ಸಮಯವನ್ನೇ ವ್ಯರ್ಥ ಮಾಡಿವೆ. ಈ ಎರಡೂ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಯುತ್ತಿದೆ. ಹೀಗಿದ್ದರೂ ಪಾದಯಾತ್ರೆ ಮಾಡುತ್ತಿರುವುದು ಸರಿಯಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮುಡಾ ಹಗಣರಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯಪಾಲರಿಗೆ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ನೀಡಲಾಗಿದೆ. 1935ರಿಂದ ಇಲ್ಲಿಯವರೆಗೆ ನಡೆದ ಘಟನಾವಳಿಗಳ ಸ್ಪಷ್ಟ ಮಾಹಿತಿಯನ್ನು ಸಿಎಂ ಕೊಟ್ಟಿದ್ದಾರೆ. ಅವರದೇ ಪಕ್ಷದ ಬಸವನಗೌಡ ಪಾಟೀಲ್ ಯತ್ನಾಳ್ ಕೂಡ ಹಗರಣದ ತನಿಖಾ ವರದಿ ಬರಲಿ. ನಂತರ ಪಾದಯಾತ್ರೆ ಎಂದಿದ್ದಾರೆ. ಹೀಗಿದ್ದರೂ ರಾಜಕಾರಣಕ್ಕಾಗಿ ಈ ಪಾದಯಾತ್ರೆ ಮಾಡುತ್ತಿರುವುದು ದುರದೃಷ್ಟಕರ ಎಂದರು.
ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ಬಡವರಿಗೂ ಭಾಗ್ಯದ ಮೂಲಕ ನ್ಯಾಯ ನೀಡುತ್ತಿದ್ದಾರೆ. ನಿಜವಾಗಿಯೂ ಕಪ್ಪುಚುಕ್ಕೆ ಇಲ್ಲದ ಮಾನವೀಯತೆಯ ಸಿಎಂ ಅವರಾಗಿದ್ದಾರೆ. ಹೇಗಾದರೂ ಮಾಡಿ ಸರ್ಕಾರವನ್ನು ಉರುಳಿಸಬೇಕೆಂಬ ಕುತಂತ್ರ ಈ ಪಾದಯಾತ್ರೆಯ ಹಿಂದೆ ಅಡಗಿದೆ. ತೇಜೋವಧೆ ಮಾಡುವುದೇ ಬಿಜೆಪಿಗರ ಉದ್ದೇಶ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net