

ಬೇಲೂರು: ಬ್ಯಾಂಕಿನ ಷೇರುದಾರರು ಕೇವಲ ಸರ್ವ ಸದಸ್ಯರ ಮಹಾಸಭೆಗೆ ಬಂದು ಸಹಿ ಮಾಡಿ ಹೋದರೆ ಸಾಲದು. ಪ್ರತಿನಿತ್ಯ ಬ್ಯಾಂಕಿಗೆ ಬಂದು ವ್ಯವಹಾರ ನಡೆಸಿ ಆಡಳಿತ ಮಂಡಳಿಗೆ ಸಲಹೆ ಸಹಕಾರ ನೀಡಿದರೆ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಬೇಲೂರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸ್ವಾಮಿಗೌಡ ಹೇಳಿದರು.
ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಬೇಲೂರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2022-23ನೇ ಸಾಲಿನ ವರ್ಷಾಂತ್ಯಕ್ಕೆ ಷೇರು ಬಂಡವಾಳವಾಗಿ 50,33,733 ರೂ. ಇದ್ದು, ಬ್ಯಾಂಕ್ ತನ್ನ ಕಾರ್ಯ ವ್ಯಾಪ್ತಿಯಲ್ಲಿರುವ ಸದಸ್ಯರ ಆರ್ಥಿಕಾಭಿವೃದ್ಧಿಗೆ ಸಹಾಯ ಮಾಡುತ್ತಿದೆ. ಜತೆಗೆ ಈ ವರ್ಷಾಂತ್ಯಕ್ಕೆ 16.30 ಕೋಟಿ ರೂ.ಠೇವಣಿ ಇದೆ. ನಮ್ಮ ಬ್ಯಾಂಕಿನ ಸದಸ್ಯರು, ಗ್ರಾಹಕರು, ಸಂಘ ಸಂಸ್ಥೆಗಳು ಹೆಚ್ಚು ಉಳಿತಾಯಕ್ಕಾಗಿ ನಮ್ಮ ಬ್ಯಾಂಕಿನಲ್ಲಿ ಹಣ ಠೇವಣಿ ಇಡುವುದರ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು.
ಮುಂದಿನ ದಿನಗಳಲ್ಲಿ ಬ್ಯಾಂಕ್‌ನಿಂದ ಎಟಿಎಂ ತೆರೆಯಲಿದ್ದೇವೆ. ಸ್ವಂತ ಕಟ್ಟಡ ಹೊಂದಲು ನಿವೇಶನ ಕೋರಿ ಶಾಸಕರಲ್ಲಿ ಮನವಿ ಮಾಡಿದ್ದೇವೆ. ಸದಸ್ಯರು ಡಿವಿಡೆಂಡ್ ಹಣವನ್ನು ಸಮಯಕ್ಕೆ ಸರಿಯಾಗಿ ಪಡೆಯಬೇಕಿದೆ. ಸಾಲ ಪಡೆದವರು ಸಕಾಲಕ್ಕೆ ಹಣ ಕಟ್ಟಿದರೆ ಬ್ಯಾಂಕ್ ಅಭಿವೃದ್ಧಿಗೆ ಸಹಾಯವಾಗುತ್ತದೆ. ಜನ್‌ದನ್ ಯೋಜನೆಯಡಿ ಜೀರೊ ಬ್ಯಾಲೆನ್ಸ್‌ನಲ್ಲಿ ಖಾತೆ ತೆರೆದು ವ್ಯವಹಾರ ಮಾಡ ಬಹುದಾಗಿದೆ ಎಂದರು.
ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಎಂ.ಪಿ.ತಾರಾನಾಥ್, ನಿರ್ದೇಶಕರಾದ ಎಂ.ವಿ.ಹೇಮಾವತಿ, ಆರ್.ಎಸ್.ಸುಬ್ರಹ್ಮಣ್ಯ, ಬಿ.ಎನ್.ಚಂದ್ರಶೇಖರ್, ಲಕ್ಷ್ಮಣ್‌ಗೌಡ, ಬಲರಾಮೇಗೌಡ, ಲೀಲಾ, ಎಸ್.ಕೆ.ನಾಗೇಶ್, ಬಿ.ಬಿ.ಶಿವರಾಜ್, ಜಯಶ್ರೀ, ವ್ಯವಸ್ಥಾಪಕ ಶಿವಶಂಕರ್ ಇತರರಿದ್ದರು.