

ಸೊರಬ: ಷೇರುದಾರರು ಸಹಕಾರ ಸಂಘಗಳಲ್ಲಿ ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ಸಕಾಲಕ್ಕೆ ಮರುಪಾವತಿ ಮಾಡಿದರೆ ಸಂಘಗಳು ಉನ್ನತಿ ಹೊಂದಲು ಸಾಧ್ಯವಾಗುತ್ತದೆ ಎಂದು ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ. ರಾಮಪ್ಪ ಹೊಳೆಕೊಪ್ಪ ತಿಳಿಸಿದರು.
ತಾಲೂಕಿನ ಹೊಳೆಕೊಪ್ಪ ಗ್ರಾಮದ ಶ್ರೀ ಧನಾಂಜನೇಯ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಳಲಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸದಸ್ಯರ ಉತ್ತಮ ವಹಿವಾಟಿನಿಂದ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಪಥದತ್ತ ಸಾಗುತ್ತಾ, ಲಾಭದಲ್ಲಿರುವುದು ಶ್ಲಾಘನೀಯ. ಸಹಕಾರ ಸಂಘದಲ್ಲಿನ ಷೇರುದಾರರು ಒಂದು ಕುಟುಂಬದಂತೆ ಒಗ್ಗಟ್ಟಿನಿಂದ ಮುನ್ನಡೆದಾಗ ಮಾತ್ರ ಸಂಘಗಳು ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಳಲಗದ್ದೆ ಸಹಕಾರ ಸಂಘ ಮಾದರಿಯಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿಕೊಳ್ಳಲು ಸದಸ್ಯರು ಕೈಜೋಡಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಆರ್.ಅಶೋಕ್ ಹೆಗಡೆ ಮಾತನಾಡಿ, ರೈತರಿಗೆ ಸ್ಪಂದಿಸಿ ಅಗತ್ಯ ಸೌಲಭ್ಯ ಮತ್ತು ಸಹಕಾರವನ್ನು ಒದಗಿಸುವುದೇ ಸಂಘದ ಪ್ರಮುಖ ಧ್ಯೇಯವಾಗಿದ್ದು 1296 ಸದಸ್ಯರನ್ನು ಹೊಂದಿದೆ. 2022-23ನೇ ಸಾಲಿನಲ್ಲಿ ಸಂಘವು 15 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ರೈತರಿಗೆ ಮುಂದಿನ ದಿನಗಳಲ್ಲಿ ಸಂಘದಿಂದ ಹೆಚ್ಚಿನ ಸಾಲ ಸೌಲಭ್ಯ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ರಸಗೊಬ್ಬರ, ಕೀಟನಾಶಕ ಹಾಗೂ ಕೃಷಿ ಉಪಕರಣ ಹೀಗೆ ರೈತರಿಗೆ ಅನುಕೂಲವಾಗುವ ವಸ್ತುಗಳ ಮಾರಾಟ ಮಾಡುವ ಯೋಜನೆ ರೂಪಿಸಿಸಲಾಗಿದೆ. ರೈತರಿಗೆ ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳ ಮೂಲಕ 10 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ. ಸಂಘದಲ್ಲಿ ರೈತರಿಗೆ ಆರ್‌ಟಿಸಿ ಪಡೆಯಲು, ಬೆಳೆ ವಿಮೆ ಮಾಡಿಸಲು ಅನುಕೂಲ ಕಲ್ಪಿಸಲಾಗಿದೆ. ರೈತರು ತಮ್ಮ ಜಮೀನುಗಳ ಖಾತೆಗೆ ಆಧಾರ್ ಮತ್ತು ಬ್ಯಾಂಕ್ ಖಾತೆಯನ್ನು ಜೋಡಿಸಿದರೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ವಿನಯ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಕೆ.ಎಂ.ಗಣಪತಿ, ನಿರ್ದೇಶಕರಾದ ಕೆ.ಕೀರ್ತಿರಾಜ ಕಾನಳ್ಳಿ, ಕೆ.ಪರಶುರಾಮ ಕೋಳಿಸಾಲು, ಬಿ.ರಾಮಪ್ಪ, ನಾಗಾರ್ಜುನ, ವೀರಭದ್ರಗೌಡ, ಸತ್ಯಪ್ಪ, ಕ್ಷೇತ್ರಾಧಿಕಾರಿ ಎಂ.ಬಿ.ಶರಣಪ್ಪ ಇತರರಿದ್ದರು.