

ನೆಲಮಂಗಲ: ದೇಶದ ಪ್ರತಿಯೊಬ್ಬ ಪ್ರಜೆಗೂ ಕಾನೂನು ಅರಿವು ಮುಖ್ಯ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲತಾ ತಿಳಿಸಿದರು.
ತಾಲೂಕಿನ ಮಹದೇವಪುರದ ಸ್ತ್ರೀಶಕ್ತಿ ಭವನದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಹಾಗೂ ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಕಳ್ಳಸಾಗಣೆ, ಲೈಂಗಿಕ ಶೋಷಣೆ ತಡೆ ಕುರಿತ ಉಚಿತ ಕಾನೂನು ಅರಿವು ಶಿಬಿರದಲ್ಲಿ ಮಾತನಾಡಿದರು.
ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನ ಮೂಲಭೂತ ಹಕ್ಕು ಕಲ್ಪಿಸಿದೆ. ಕಾನೂನಿನ ಮುಂದೆ ಸರ್ವರೂ ಸಮಾನರು. ದೇಶದುದ್ದಗಲಕ್ಕೂ ನೆಲೆಸುವ, ಶಿಕ್ಷಣ ಪಡೆಯುವ, ಇಷ್ಟವಾದ ಧರ್ಮ ಆಚರಿಸುವ, ಉದ್ಯೋಗ ಹೊಂದುವ, ವ್ಯವಹರಿಸುವ ಅವಕಾಶ ನೀಡಿದ್ದು, ವಯಕ್ತಿಕ ಹಾಗೂ ಸಾಮಾಜಿಕವಾಗಿ ಉತ್ತಮ ಬದುಕು ರೂಪಿಸಿಕೊಂಡು ಸ್ವತಂತ್ರವಾಗಿ ಅಭಿವೃದ್ಧಿ ಹೊಂದಬಹುದಾಗಿದೆ ಎಂದರು.
ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌಜನ್ಯ ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ನಿಟ್ಟಿನಲ್ಲಿ ಇಲಾಖೆ ನಿರ್ದೇಶನದಂತೆ ಪ್ರತಿ ಪಂಚಾಯಿತಿಮಟ್ಟದಲ್ಲಿ ಕಾರ್ಯಪಡೆ ನೇಮಕ ಮಾಡಲಾಗಿದೆ ಎಂದರು.
ವಕೀಲ ವಸಂತ್ ಕುಮಾರ್ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕಿದೆ. ನಾಲ್ಕು ಗೋಡೆಗೆ ಸಿಮೀತವಾಗಿದ್ದ ಹೆಣ್ಣು ಇಂದು ರಾಷ್ಟ್ರದ ಚುಕ್ಕಾಣಿ ಹಿಡಿಯುವ ಮಟ್ಟದಲ್ಲಿ ಬೆಳೆದಿರುವುದು ಸಂತಸದ ಸಂಗತಿ. ಆಸೆ ಆಮಿಷಕ್ಕೆ ಹೆಣ್ಣು ಮಕ್ಕಳು ಒಳಗಾಗಬಾರದು ಎಂದರು.
ಮಕ್ಕಳನ್ನು ಕಳ್ಳಸಾಗಣಿಕೆ ಮಾಡಿ ಬಿಕ್ಷಾಟನೆಯಲ್ಲಿ ತೊಡಗಿಸುವುದು ಒಂದೆಡಯಾದರೆ ಮಹಿಳೆಯರು ಕಳ್ಳಸಾಗಣಿಕೆ ಮಾಡಿ ವೈಶ್ಯಾವಟಿಕೆಯಲ್ಲಿ ಬಳಿಸಿಕೊಳ್ಳುತ್ತಿದ್ದಾರೆ. ಹೆಣ್ಣು ಮಕ್ಕಳು ಹೆಚ್ಚು ವಿದ್ಯಾವಂತರಾದಗ ಮಾತ್ರ ಹೆಣ್ಣಿನ ಮೇಲಿನ ದೌರ್ಜನ್ಯ ತಡೆ ಸಾಧ್ಯ ಎಂದರು.
ವಕೀಲ ಉಮೇಶ್‌ಬಾಬು, ಸಿಬ್ಬಂದಿ ವೈಶಾಲಿ, ನಿರ್ಮಾಲಾ, ಹೇಮಾವತಿ, ಸುಜಾತಾ ಹಿರೇಮಠ್, ಒಕ್ಕೂಟ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ವೇದಾವತಿ, ತಾಲೂಕು ಮಾಜಿ ಅಧ್ಯಕ್ಷೆ ಹನುಮಂತಮ್ಮ, ಸದಸ್ಯೆ ರಾಜಮ್ಮ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.