ಭಾಷೆ ಅಳಿದರೆ ಬದುಕು ದುಸ್ತರ

20 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾಷೆ ಅಳಿದರೆ ಬದುಕೇ ದುಸ್ತರ. ಭಾಷೆ ನಮ್ಮ ಬದುಕು ಮಾತ್ರವಲ್ಲ. ಭಾಷೆ ಉಳಿದಾಗಲೇ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ವೈದ್ಯ ಡಾ. ಸಂಜೀವ ಕುಲಕರ್ಣಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಘದ ಸಂಸ್ಥಾಪಕ ಹಾಗೂ ಸಂಸ್ಥಾಪನಾ ಕಾರ್ಯದರ್ಶಿ ರಾ.ಹ. ದೇಶಪಾಂಡೆ ಜನ್ಮ ದಿನದ ಸ್ಮರಣೆಯಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡದ ಆಸ್ಮಿತೆ: ಅಂದು-ಇಂದು ಕುರಿತು ಅವರು ಮಾತನಾಡಿದರು.

1956ರಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡದ ಪ್ರದೇಶಗಳನ್ನು ಒಗ್ಗೂಡಿಸಲು ಅನೇಕರು ಹೋರಾಡಿದರು. ಇದರ ಫಲವಾಗಿ ಮೈಸೂರು ರಾಜ್ಯ ಉದಯವಾಯಿತು. ಆದರೆ ಅದು ಸಮಗ್ರ ಕರ್ನಾಟಕ ಪರಿಕಲ್ಪನೆಯಾಗಿರಲಿಲ್ಲ. ಆಗ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕರ್ನಾಟಕ ಎಂಬ ಹೆಸರಿನಿಂದ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ರಾ.ಹ. ದೇಶಪಾಂಡೆ ಕನ್ನಡ ಭಾಷೆ, ಉಳಿವಿಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದರು. ಇಂದು ಕನ್ನಡ ಭಾಷೆ ತನ್ನತನ ಉಳಿಸಿಕೊಂಡು ಅಸ್ತಿತ್ವ ಕಾಪಾಡಿಕೊಳ್ಳಬೇಕಿದೆ ಎಂದರು.

ಆಂಗ್ಲ ಭಾಷಾ ವ್ಯಾಮೋಹ, ಆಧುನಿಕ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಜಾಗತೀಕರಣದಿಂದ ಕನ್ನಡಕ್ಕೆ ನಿರಂತರ ಪೆಟ್ಟು ಬೀಳುತ್ತಿದೆ. ಇನ್ನು 20 ವರ್ಷ ಇದೇ ಸ್ಥಿತಿ ಮುಂದುವರೆದರೆ ಕನ್ನಡ ಮನೆ ಭಾಷೆಯಾಗಿ ಉಳಿಯಬಹುದೇ ವಿನಃ ರಾಜ್ಯ ಭಾಷೆಯಾಗಲು ಸಾಧ್ಯವಿಲ್ಲ. ಕನ್ನಡದ ಮನುಸ್ಸುಗಳುಳ್ಳ ಒಂದು ಜನಾಂಗ ಸೃಷ್ಟಿ ಆಗಬೇಕಾಗಿದೆ ಎಂದರು.

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಬಸವಪ್ರಭು ಹೊಸಕೇರಿ, ಶಂಕರ ಕುಂಬಿ, ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಡಾ. ಶ್ರೀಶೈಲ ಹುದ್ದಾರ, ಡಾ. ಎಚ್​.ವಿ. ಬೆಳಗಲಿ, ಶ್ರೀನಿವಾಸ ವಾಡಪ್ಪಿ, ಎಂ.ಎಂ. ಚಿಕ್ಕಮಠ, ಇತರರು ಇದ್ದರು.

ರಾ.ಹ. ದೇಶಪಾಂಡೆ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಶಂಕರ ಹಲಗತ್ತಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net