

ಸಿದ್ದಾಪುರ : ಸಿದ್ದಾಪುರದ ಬಿಬಿಟಿಸಿ ಸಂಸ್ಥೆಯ ಸುಮಾರು 2400 ಎಕರೆ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂ ಪರಿವರ್ತನೆಯನ್ನು ವಿರೋಧಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸೋಮವಾರ ಸಿದ್ದಾಪುರ ಪಟ್ಟಣದಲ್ಲಿ ಮಾನವ ಸರಪಳಿ ರಚಿಸಿ ಜನಜಾಗೃತಿ ಮೂಡಿಸಿತು.
ಸಿಎನ್‌ಸಿ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ಸಿದ್ದಾಪುರ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾವಿರಾರು ಎಕರೆ ಕಾಫಿ ತೋಟಗಳು ಭೂಪರಿವರ್ತನೆಯಾಗುತ್ತಿವೆ. ಈ ಭೂಪರಿವರ್ತನೆಗಳನ್ನು ತಡೆಯದೆ ಹೋದರೆ ಕೊಡವರು ಅಲೆಮಾರಿಗಳಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಿದ್ದಾಪುರ, ತಡಿಯಂಡಮೋಳ್, ಗಾಳಿಬೀಡು ಭಾಗದಲ್ಲಿ ಸಾವಿರಾರು ಎಕರೆ ಕಾಫಿ ತೋಟ ನಿವೇಶನವಾಗಿ ಮಾರ್ಪಟ್ಟಿದೆ. ಅಲ್ಲಿ ಮನೆಗಳನ್ನು ಕಟ್ಟಿದರೆ ಅಲ್ಲಿನ ಲಕ್ಷಾಂತರ ಜನ ನೆಲೆಸುತ್ತಾರೆ. ಆಗ ಕೊಡಗಿನಲ್ಲಿ ಜನಸಂಖ್ಯಾ ಸ್ಫೋಟ ಸಂಭವಿಸಿ, ಕೊಡವರ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಲ್ಲಿನ ಮೂಲನಿವಾಸಿಗಳು ವಾಸದ ಮನೆ ನಿರ್ಮಿಸಲು ಅನುಮತಿ ಕೋರಿದರೆ ಹಸಿರು ವಲಯವೆಂದು ಅಡ್ಡಿಪಡಿಸುವ ಆಡಳಿತ ವ್ಯವಸ್ಥೆ, ಭೂಮಾಫಿಯಾಗಳು ಸಾವಿರಾರು ಎಕರೆ ಹಸಿರ ಭೂಮಿಯನ್ನು ಪರಿವರ್ತನೆ ಮಾಡುತ್ತಿದ್ದರೆ ಮೌನಕ್ಕೆ ಶರಣಾಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಬೆಳೆಗಾರರು ಕೇವಲ 15 ದಿನದ ಮಟ್ಟಿಗೆ ನದಿಯಿಂದ ತೋಟಗಳಿಗೆ ನೀರು ಬಳಸಿದರೆ ಇಲ್ಲದ ಕಾನೂನು ಹೇರಿ ನೀರು ಬಳಸದಂತೆ ಮಾಡುವ ಆಡಳಿತ ವರ್ಗ ಇಂತಹ ಭೂಪರಿವರ್ತನೆಗಳನ್ನು ಏಕೆ ತಡೆಯುತ್ತಿಲ್ಲ ಎಂದು ಕಿಡಿಕಾರಿದ ಅವರು, ಒಂದು ವೇಳೆ ಕಾಫಿತೋಟಗಳು ಭೂಪರಿವರ್ತನೆಯಾಗಿ ಮನೆಗಳು ನಿರ್ಮಾಣವಾದರೆ ಇಲ್ಲಿ ಹರಿಯುವ ಜಲಮೂಲಗಳು ನಾಶವಾಗುತ್ತವೆ. ನದಿಗೆ ನೀರು ಸೇರುವಿಕೆ ಪ್ರಮಾಣ ಕುಸಿಯುತ್ತದೆ. ಪರಿಸರ ಸಮತೋಲನ ತಪ್ಪುತ್ತದೆ. ಕೂಡಲೇ ಇಂತಹ ಪ್ರಕ್ರಿಯೆಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಚೆಂದಂಡ ಚಿಮ್ಮಿ ಪೂವಯ್ಯ, ಚೇರಂಡ ಸುನೀಲ್,ಚೇರಂಡ ಸುಭಾಷ್, ಅನಾಕರ್ಂಡ ವಿಜು, ಇಟ್ಟಿರ ಸಬಿತಾ ಭೀಮಯ್ಯ ಇತರರು ಭಾಗವಹಿಸಿದ್ದರು.