

ಮಡಿಕೇರಿ: ಸಿದ್ದಾಪುರ ಕಾವೇರಿ ಜಲಾನಯನ ಪ್ರದೇಶದ ೨೪೦೦ ಎಕರೆ ಬಿಬಿಟಿಸಿ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆಗಳನ್ನು ತಡೆಯದಿದ್ದಲ್ಲಿ ಮುಂದೊಂದು ದಿನ ಪವಿತ್ರ ಕಾವೇರಿಯ ತವರು ಕೊಡವ ಲ್ಯಾಂಡ್ ಮರೆಯಾಗಿ ಕೊಡವರು ಅಲೆಮಾರಿಗಳಾಗಬೇಕಾಗುತ್ತದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಭೂಪರಿವರ್ತನೆಯ ವಿರುದ್ಧ ಬಿರುನಾಣಿಯಲ್ಲಿ ಸೋಮವಾರ ಶಾಂತಿಯುತ ಮಾನವ ಸರಪಳಿ ನಿರ್ಮಿಸುವ ಮೂಲಕ ಸಿಎನ್‌ಸಿಯ ಜನಜಾಗೃತಿ ಕಾರ್ಯಕ್ರಮವನ್ನು ಆರಂಭಿಸಿದ ಅವರು ಕೊಡವ ಲ್ಯಾಂಡ್ ನ್ನು ಉಳಿಸಿಕೊಳ್ಳಲು ಕೊಡವರೆಲ್ಲರು ಒಗ್ಗೂಡುವಂತೆ ಕರೆ ನೀಡಿದರು.
ಮೂಲನಿವಾಸಿಗಳು ವಾಸದ ಮನೆ ನಿರ್ಮಿಸಲು ಅನುಮತಿ ಕೋರಿದರೆ ಹಸಿರು ವಲಯ ಪ್ರದೇಶವೆಂದು ಅಡ್ಡಿ ಪಡಿಸುವ ಆಡಳಿತ ವ್ಯವಸ್ಥೆ ಭೂಮಾಫಿಯಾಗಳು ಸಾವಿರಾರು ಏಕರೆ ಹಸಿರ ಭೂಮಿಯನ್ನು ಪರಿವರ್ತನೆ ಮಾಡುತ್ತಿದ್ದರೆ ಮೌನಕ್ಕೆ ಶರಣಾಗಿದೆ ಮತ್ತು ಬೆಂಬಲ ನೀಡುತ್ತಿದೆ. ಸ್ಥಳೀಯ ಬೆಳೆಗಾರರು ಕೇವಲ ೧೫ ದಿನದ ಮಟ್ಟಿಗೆ ನದಿಯಿಂದ ತೋಟಗಳಿಗೆ ನೀರು ಬಳಸಿದರೆ ಇಲ್ಲದ ಕಾನೂನುಗಳನ್ನು ಹೇರಿ ನೀರು ಬಳಸದಂತೆ ಮಾಡುವ ಆಡಳಿತಗಾರರು, ಸಾವಿರಾರು ಏಕರೆ ಟೀ ಎಸ್ಟೇಟ್‌ಗೆ ಬಂಡವಾಳಶಾಹಿಗಳು ಕಕ್ಕಟ್ಟುಪೊಳೆಯಿಂದ ನೀರು ಬಳಸುತ್ತಿರುವಾಗ ಮೌ ವಹಿಸಿರುವುದು ಏಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದಾಪುರದಲ್ಲಿ ಕಾಫಿ ತೋಟವನ್ನು ಪರಿವರ್ತಿಸುವ ಮೂಲಕ ದೈತ್ಯಾಕಾರದ ವಿಲ್ಲಾಗಳು, ಮೆಗಾ ಟೌನ್‌ಶಿಪ್‌ಗಳು ಮತ್ತು ಮನೆ ನಿವೇಶನಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಯುನೆಸ್ಕೋದ ವಿಶ್ವ ಪರಂಪರೆಯ ತಾಣದ ಅಡಿಯಲ್ಲಿ ಬರುವ ತಡಿಯಂಡಮೋಲ್‌ನ ಕೆಳಗೆ ೩೦೦ ಏಕರೆ ಕಾಫಿ ತೋಟಗಳು ಪರಿವರ್ತನೆಯಾಗಿದೆ. ಮಕ್ಕಂದೂರಿನ ಪಶ್ಚಿಮ ಘಟ್ಟಗಳ ವಲಯದಲ್ಲಿ ಅಕ್ರಮವಾಗಿ ರೆಸಾರ್ಟ್ ಅನ್ನು ನಿರ್ಮಿಸಲಾಗಿದೆ. ಅಲ್ಲದೆ ಗಾಳಿಬೀಡಿನ ಹಸಿರು ಬೆಲ್ಟ್ ಪ್ರದೇಶದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಹೈದರಾಬಾದ್ ನವರು ಹೌಸಿಂಗ್ ಕಾಲನಿ ಅಭಿವೃದ್ಧಿಪಡಿಸುತ್ತಿದ್ದಾರೆ. ಅರೆಕಾಡ್‌ನಲ್ಲಿ ಡಾಬರ್ ಟೌನ್‌ಶಿಪ್‌ಗಳು ತಲೆ ಎತ್ತುತ್ತಿವೆ ಎಂದು ನಾಚಪ್ಪ ಆರೋಪಿಸಿದರು.
ಕೊಡಗಿನಾದ್ಯಂತ ಎಲ್ಲಾ ಕುಗ್ರಾಮಗಳು, ಹಳ್ಳಿಗಳು, ಕೊಡವರ ಪವಿತ್ರ ಭೂಪ್ರದೇಶ ನಾಶವಾಗುತ್ತಿದೆ. ದುರಾಸೆಯ ರಾಕ್ಷಸರು ನಡೆಸುತ್ತಿರುವ ಮಣ್ಣು ಅಗೆಯುವ ಕೆಲಸದಲ್ಲಿ ನಮ್ಮ ಬಹುವಾರ್ಷಿಕ ಜಲಮೂಲಗಳ ನರ ಕೇಂದ್ರಗಳು ಈಗಾಗಲೇ ಮುಚ್ಚಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ಕೊಡವ ಲ್ಯಾಂಡ್ ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವೆಂದು ಪ್ರತಿಪಾದಿಸಿದರು.
ಜಿಲ್ಲೆಯಲ್ಲಿ ಬೃಹತ್ ಭೂಪರಿವರ್ತನೆಗಳು ನಿಲ್ಲುವಲ್ಲಿಯವರೆಗೆ ಸಿಎನ್‌ಸಿ ವತಿಯಿಂದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ. ಜೂ.೧೦ ರಂದು ಬಾಳೆಲೆಯಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಮಾನವ ಸರಪಳಿಯಲ್ಲಿ ಬೊಟ್ಟಂಗಡ ಸವಿತಾ ಗಿರೀಶ್, ಕಳಕಂಡ ಗಂಗಮ್ಮ, ಬೊಟ್ಟಂಗಡ ಗಿರೀಶ್, ಬುಟ್ಟಿಯಂಡ ತಂಬಿ ನಾಣಯ್ಯ, ಕಾಳಿಮಾಡ ಸೋಮಯ್ಯ, ಚಟ್ಟಂಗಡ ಸೋಮಣ್ಣ, ಕುಪ್ಪನಮಾಡ ಪ್ರೀತಂ, ಅಣ್ಣಳಮಾಡ ಸುರೇಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟೀರ ಲೋಕೇಶ್, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನಾಂಗಬಾಂದವರು ಪಾಲ್ಗೊಂಡು ಸಿಎನ್‌ಸಿ ಹಕ್ಕೊತ್ತಾಯಗಳ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.