ಕೆರೆ-ಕಟ್ಟೆಗಳು ತುಂಬಿದರೆ ರೈತರ ಬದುಕು ಹಸನು

08 HRS 01
ಹಿರೀಸಾವೆ ಹೋಬಳಿ ಚನ್ನೇನಹಳ್ಳಿ ಗ್ರಾಮದ ಬಳಿ ಶ್ರವಣಬೆಳಗೊಳ-ಜುಟ್ಟನಹಳ್ಳಿ ಏತನೀರಾವರಿ ಯೋಜನೆಯಡಿ ಕಾಲುವೆ ಮೂಲಕ ಮತಿಘಟ್ಟ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ಬಿ.ಕೆ.ಮಂಜೇಗೌಡ, ಎ.ಜಿ.ಪ್ರಭಾಕರ್, ಶ್ರೀಕಂಠೇಗೌಡ, ಸುನೀಲ್ ಇದ್ದರು.
Published on

ಹಿರೀಸಾವೆ: ಕಾಲ ಕಾಲಕ್ಕೆ ಕೆರೆ-ಕಟ್ಟೆಗಳು ತುಂಬಿದಲ್ಲಿ ಮಾತ್ರ ರೈತರ ಬದುಕು ಹಸನಾಗಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ಹೋಬಳಿಯ ಚನ್ನೇನಹಳ್ಳಿ ಗ್ರಾಮದ ಬಳಿ ಶ್ರವಣಬೆಳಗೊಳ-ಜುಟ್ಟನಹಳ್ಳಿ ಏತನೀರಾವರಿ ಯೋಜನೆಯಡಿ ಕಾಲುವೆ ಮೂಲಕ ಮತಿಘಟ್ಟ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ರೈತರ ಬದುಕು ಸದೃಢಗೊಂಡರೆ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಕಳೆದ ಎರಡನೇ ವರ್ಷದಲ್ಲಿ ಏತನೀರಾವರಿ ಯೋಜನೆಯಡಿ ನುಗ್ಗೇಹಳ್ಳಿ, ಹಿರೀಸಾವೆ ಹಾಗೂ ಶ್ರವಣಬೆಳಗೊಳ ಹೋಬಳಿ ವ್ಯಾಪ್ತಿಯ ನೂರಾರು ಕೆರೆಗಳನ್ನು ತುಂಬಿಸಲಾಗಿತ್ತು. ಆದರೆ ಕಳೆದ ವರ್ಷ ವಾಡಿಕೆಯಂತೆ ಮಳೆಯಾಗದ ಕಾರಣ ಜಲಾಶಯಗಳಲ್ಲಿಯೇ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದ್ದರಿಂದ ಕೆರೆ-ಕಟ್ಟೆಗಳಿಗೆ ನೀರು ಹರಿಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.


ಸದ್ಯ ಈ ಬಾರಿ ಮಲೆನಾಡು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು ಜಲಾಶಯಗಳಿಂದ ನೀರು ಹೊರ ಬಿಡಲಾಗುತ್ತಿದೆ. ಈ ವರ್ಷ ತಾಲೂಕಿನ ಬಹುತೇಕ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಅಂತರ್ಜಲ ಚೇತರಿಕೆ ಕಾಣಲಿದ್ದು ಮುಂದಿನ ಬೇಸಿಗೆ ಅವಧಿಯಲ್ಲಿ ವ್ಯಾಪ್ತಿಯ ಕೊಳವೆ ಬಾವಿಗಳು ರೈತರಿಗೆ ಆಸರೆಯಾಗಲಿವೆ ಎಂದು ಆಶಯ ವ್ಯಕ್ತಪಡಿಸಿದರು.
900 ಎಚ್‌ಪಿ ಸಾಮರ್ಥ್ಯವುಳ್ಳ 2 ಮೋಟರ್‌ಗಳು ಚಾಲನೆಯಲ್ಲಿದ್ದು ಮುಂದಿನ 20 ದಿನಗಳಲ್ಲಿ ಮತಿಘಟ್ಟ ಕೆರೆ ತುಂಬಿ ಕೋಡಿ ಮೂಲಕ ಹಿರೀಸಾವೆ ದೊಡ್ಡಕೆರೆಗೆ ನೀರು ಹರಿಯಲಿದೆ. ನಂತರ ಅಲ್ಲಿಂದ ಬಾಳಗಂಚಿ ಕೆರೆಗೆ ನೀರು ಸಾಗಲಿದೆ ಎಂದು ಮಾಹಿತಿ ನೀಡಿದರು.


ಇನ್ನು ಬಲ ಭಾಗದ ಕಾಲುವೆಯ ಕಾಮಗಾರಿ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದ್ದು ಅದರ ಮೂಲಕ ಜುಟ್ಟನಹಳ್ಳಿ, ಹೆಗಟಿಕೆರೆ ಹಾಗೂ ಮದನೆ ಕೆರೆಗೆ ನೀರು ಹರಿಸಲಾಗುವುದು. ಮುಂದಿನ ದಿನಗಳಲ್ಲಿ ಆಯರಹಳ್ಳಿ ಕೆರೆಗೂ ಆದ್ಯತೆ ನೀಡಲಾಗಿವುದು ಎಂದು ಭರವಸೆ ನೀಡಿದರು.
70 ಕೋಟಿ ರೂ. ವೆಚ್ಚದ ತೋಟಿಕೆರೆ ಏತನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಕೆರೆಗಳಿಗೆ 20 ದಿನಗಳಲ್ಲಿ ಮೊದಲು ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು. ಅಕ್ಕನಹಳ್ಳಿ, ಜಿನ್ನೇನಹಳ್ಳಿ, ಬೆಳಗಿಹಳ್ಳಿ, ಮಟ್ಟನವಿಲೆ, ಜಂಬೂರು, ಗೌಡಗೆರೆ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ತೋಟಿಕೆರೆ, ಮಾದಲಗೆರೆ, ಬೆಳಗಿಹಳ್ಳಿ, ಮೇಟಿಕೆರೆ, ಕಟಗಿಹಳ್ಳಿ, ಅಕ್ಕನಹಳ್ಳಿ, ಸೋಸಲಗೆರೆ, ಬದ್ದಿಕೆರೆ, ಹೆಬ್ಬಳಲು, ಬಾಣನಕೆರೆ ಹಾಗೂ ಕಗ್ಗೆರೆ ಸೇರಿದಂತೆ 35ಕ್ಕೂ ಹೆಚ್ಚು ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವುದರಿಂದ ಈ ಭಾಗದ ರೈತರ ಭೂಮಿಯಲ್ಲಿ ಅಂತರ್ಜಲ ವೃದ್ಧಿಯಾಗಿ ತೆಂಗು ಬೆಳೆ ಉಳಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.


ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಕೆ.ಮಂಜೇಗೌಡ, ಮತಿಘಟ್ಟ ಸೊಸೈಟಿ ಅಧ್ಯಕ್ಷ ಶ್ರೀಕಂಠೇಗೌಡ, ಮಾಜಿ ಅಧ್ಯಕ್ಷರಾದ ಎ.ಜಿ.ಪ್ರಭಾಕರ್, ಸುನೀಲ್ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net