ಕಸ್ತೂರಿ ರಂಗನ್ ವರದಿ ಜಾರಿಯಾದರೆ ಸಮಸ್ಯೆ

SRS KAGERI
Published on

ಶಿರಸಿ: ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿದೆ. ವರದಿ ಜಾರಿಯಾದಲ್ಲಿ ಜಿಲ್ಲೆಯ ಜನಜೀವನಕ್ಕೆ ಸಮಸ್ಯೆ ಉಂಟಾಗಲಿದೆ. ಪಶ್ಚಿಮ ಘಟ್ಟದಲ್ಲಿ ಈ ವರದಿ ಜಾರಿಯಾಗದಂತೆ ಆಗ್ರಹಿಸಿ ಸಂಸತ್ ಅಧಿವೇಶನದಲ್ಲಿ ಮಾತನಾಡುವ ಜತೆಗೆ ರಾಜ್ಯ ಪಶ್ಚಿಮ ಘಟ್ಟ ವ್ಯಾಪ್ತಿಯ ಸಂಸದರು, ಕೇಂದ್ರ ಸಚಿವರ ಮೂಲಕ ಹಸಿರುಪೀಠಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕಸ್ತೂರಿ ರಂಗನ್ ವರದಿ ದುಷ್ಪರಿಣಾಮ, ಅರಣ್ಯ ಅತಿಕ್ರಮಣದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜಿಲ್ಲೆಯ ವಿವಿಧ ಭಾಗದಿಂದ ಬುಧವಾರ ಕಚೇರಿಗೆ ಆಗಮಿಸಿದವರೊಂದಿಗೆ ಅವರು ಮಾತನಾಡಿದರು. ಅರಣ್ಯ, ಪಶ್ಚಿಮ ಘಟ್ಟದ ಪರಿಸರ ಉಳಿಯಲೇಬೇಕು. ಆದರೆ, ಇಲ್ಲಿಯ ಜನಜೀವನಕ್ಕೆ ತೊಂದರೆ ಉಂಟಾಗುವ ಕಾನೂನನ್ನು ಅಳವಡಿಸಿಕೊಳ್ಳುವುದು ಉತ್ತಮವಲ್ಲ. ಉತ್ತರ ಕನ್ನಡ ಅರಣ್ಯ ಜಿಲ್ಲೆಯಾಗಿದೆ. ಇಲ್ಲಿಯ ಜನ ಸಹಜವಾಗಿಯೇ ಅನಾದಿಕಾಲದಿಂದಲೂ ಕಾಡನ್ನು ಸಂರಕ್ಷಿಸಿಕೊಂಡು ತಾವೂ ಬಾಳ್ವೆ ಮಾಡುತ್ತ ಬಂದಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಅರಣ್ಯ ಸಂರಕ್ಷಣೆಗೆ ಅಗತ್ಯವಾದ ಕಾನೂನುಗಳು ಜಾರಿಯಲ್ಲಿವೆ. ಮಾಧವ ಗಾಡ್ಗೀಳ ವರದಿ ಜಾರಿಯ ಬಗ್ಗೆ ಹಿಂದೆ ಪ್ರಸ್ತಾಪವಾದಾಗಲೂ ವಿರೋಧಿಸಿದ್ದೇನೆ. ಕೆಲ ವರ್ಷಗಳ ಹಿಂದೆ ಕಸ್ತೂರಿ ರಂಗನ್ ವರದಿ ಜಾರಿ ಪ್ರಸ್ತಾಪ ಆದಾಗ ಸಹ ವಿರೋಧಿಸಿದ್ದೇನೆ ಎಂದರು.

ಕಸ್ತೂರಿ ರಂಗನ್ ವರದಿ ಜಾರಿಯಲ್ಲಿ ಕೇರಳ ರಾಜ್ಯ ನಮಗೆ ಮಾದರಿಯಾಗಬೇಕು. ಕಸ್ತೂರಿ ರಂಗನ್ ವರದಿ ಉಪಗ್ರಹ ಆಧಾರಿತ ಸಮೀಕ್ಷೆ ಆಗಿರುವ ಕಾರಣ ಕೇರಳ ರಾಜ್ಯ ಗ್ರಾಮ ಮಟ್ಟದಲ್ಲಿ ಸಮೀಕ್ಷೆ ನಡೆಸಿ ಈ ವರದಿಯೊಂದಿಗೆ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ರಾಜ್ಯ ಸರ್ಕಾರ ಇದೇ ಮಾದರಿಯಲ್ಲಿ ವರದಿ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದ ಕಾಗೇರಿ, ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ಮೊದಲು ನಡೆಯಬೇಕು. ಈ ಅಧ್ಯಯನ ನಡೆಯದೇ ಯಾವುದೇ ಹೊಸ ಯೋಜನೆಯನ್ನು ಜಿಲ್ಲೆಯಲ್ಲಿ ಹೇರಬಾರದು ಎಂದು ಈಗಾಗಲೇ ಸಂಸತ್‌ನಲ್ಲಿ ಆಗ್ರಹಿಸಿದ್ದೇನೆ ಎಂದರು.

ಪ್ರಮುಖರಾದ ನಾಗರಾಜ ನಾಯ್ಕ ಮಾತನಾಡಿ, ಕಸ್ತೂರಿರಂಗನ್ ವರದಿ ಜಾರಿಯಿಂದ ಜಿಲ್ಲೆಯ 704 ಹಳ್ಳಿಗಳು ಬಾಧಿತವಾಗಲಿವೆ. ಉಪಗ್ರಹ ಆಧಾರಿತ ಚಿತ್ರದ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಿದ್ದರಿಂದ ಜಿಲ್ಲೆಯ ಕೃಷಿ ಭೂಮಿಗಳೂ ಅರಣ್ಯ ಎಂದು ಪರಿಗಣಿಸಲಾಗಿದೆೆ ಎಂದರು.

ಗಜು ಪೈ, ಬಾಲಚಂದ್ರ ಶೆಟ್ಟಿ ಅಚವೆ, ಭಾಸ್ಕರ್ ನಾರ್ವೇಕರ್ ಅಂಕೋಲಾ, ನಂದು ಗಾಂವಕರ್, ಯಲ್ಲಾಪುರದ ಗಣೇಶ ಹೆಗಡೆ, ಮನೋಜ ಭಟ್ ಕಾರವಾರ, ರಮೇಶ ನಾಯ್ಕ ಹಿಲ್ಲೂರ, ಬಿಂದೇಶ ನಾಯ್ಕ ಹಿಚಕಡ, ದಿನೇಶ ಪೂಜಾರಿ ಇತರರಿದ್ದರು.

ಅತಿಕ್ರಮಣದಾರರಿಗೆ ಕಾಗೇರಿ ಅಭಯ

ಜಿಲ್ಲೆಯ ಅರಣ್ಯ ಅತಿಕ್ರಮಣದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.

ಅರಣ್ಯ ಅತಿಕ್ರಮಣದಾರರು ಹಲವಾರು ವರ್ಷಗಳಿಂದ ಜೀವನ ನಿರ್ವಹಣೆಗಾಗಿ ವಾಸ್ತವ್ಯ ಮಾಡಿ ಕೃಷಿಯನ್ನೂ ನಡೆಸಿಕೊಂಡು ಬಂದಿದ್ದಾರೆ. ಅತಿಕ್ರಮಣದಾರರ ಮನೆ, ಭೂಮಿಯ ಪಹಣಿಯಲ್ಲಿ ಅವರ ಹೆಸರು ಬರುವಂತಾಗಬೇಕು ಎಂಬುದು ನನ್ನ ಆಶಯವಾಗಿದ್ದು, ಸಂಸದನಾಗಿ ಈ ನಿಟ್ಟಿನಲ್ಲಿ ನಿರಂತರ ಯತ್ನ ಮಾಡುತ್ತಿದ್ದೇನೆ. ಈ ಬಗ್ಗೆ ಕೇಂದ್ರ ಅರಣ್ಯ ಸಚಿವರನ್ನೂ ಸಹ ಭೇಟಿಯಾಗಿ ಚರ್ಚಿಸಿದ್ದೇನೆ. ಒಕ್ಕಲೆಬ್ಬಿಸುತ್ತಾರೆ ಎಂದು ಅತಿಕ್ರಮಣದಾರರು ಭಯ ಪಡೇಕಿಲ್ಲ. ಜನರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುವ ಶಕ್ತಿಗಳ ಬಗ್ಗೆ ಜಾಗೃತವಾಗಿರಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net