

ಹುಬ್ಬಳ್ಳಿ : ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ಪಾಳಯದಲ್ಲಿ ಮುಸುಕಿನ ಗುದ್ದಾಟ ಜೋರಾಗಿ ನಡೆದಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕಾಂಗ್ರೆಸ್ ಸರ್ಕಾರದ ಪತನ ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಗದೀಶ ಶೆಟ್ಟರ್, ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ ಅವರು ನೇರವಾಗಿ ಯಾವುದೇ ವಿಷಯ ಮಾತನಾಡುತ್ತಿಲ್ಲ. ಆದರೆ, ತಮ್ಮ ಬೆಂಬಲಿತ ಸಚಿವರು, ಶಾಸಕರಿಂದ ಹೇಳಿಕೆ ಕೊಡಿಸುತ್ತಿದ್ದಾರೆ. ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಮುಸುಕಿನ ಗುದ್ದಾಟಕ್ಕೆ ಕಡಿವಾಣ ಹಾಕಬೇಕು ಎಂದರು.
ಕೆಪಿಎಸ್ಸಿ ನೇಮಕಾತಿಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಸದನದಲ್ಲಿ ಚರ್ಚೆಗಳು ಸಹ ನಡೆಯುತ್ತಿವೆ. ಈ ಭ್ರಷ್ಟಾಚಾರದ ಬಗ್ಗೆ ಉನ್ನತ ತನಿಖೆಯಾಗಬೇಕು. ಯುಪಿಎಸ್ಸಿ ಮಾದರಿಯಲ್ಲಿಯೇ ಕೆಪಿಡಿಎಸ್ಸಿ ನೇಮಕಾತಿ ಹಾಗೂ ವರ್ಗಾವಣೆ ಆಗುವಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪ್ರಯಾಗ್ರಾಜ್ಗೆ ಭೇಟಿ ನೀಡಿ, ಕುಂಭಮೇಳದಲ್ಲಿ ಭಾಗಿಯಾದ ಶಾಸಕರು, ಸಚಿವರು ಹಾಗೂ ಗಣ್ಯರಿಗೆ ಉತ್ತರ ಪ್ರದೇಶ ಸರ್ಕಾರ ಅಭಿನಂದನಾ ಪತ್ರ ಕಳುಹಿಸಿದರೆ. ಅದಕ್ಕೆ ಅನ್ಯ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಹೇಳಿದರು.