‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ ನ್ಯಾಯ ಗ್ಯಾರಂಟಿ : ಡಾ. ಪುಷ್ಪಾ ಅಮರ್‌ನಾಥ್

Pushpa Amarnath-12jan19-dis
Published on

ಮೈಸೂರು: ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ ಮತ್ತು ಪಾಲುದಾರಿಕೆಯ ನ್ಯಾಯ ಜಾರಿಗೊಳಿಸಲಾಗುವುದು. ಕಾಂಗ್ರೆಸ್‌ನ ಈ ಗ್ಯಾರಂಟಿ ಕಾರ್ಡ್ ಅನ್ನು ಮನೆ ಮನೆಗೂ ತಲುಪಿ ಸಲಾಗುವುದು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಹೇಳಿದರು.

ಯುವಕರಿಗೆ ಉದ್ಯೊಗ ಖಾತ್ರಿ, ಮಹಾಲಕ್ಷ್ಮಿ ಯೋಜನೆಯಡಿ ಕುಟುಂಬಕ್ಕೆ 1 ಲಕ್ಷ ರೂ., ರೈತರ ಅನುಕುಲಕೋಸ್ಕರ ಎಂಎಸ್‌ಪಿ ಜಾರಿ, ಕೃಷಿಯಿಂದ ಜಿಎಸ್‌ಟಿ ತೆಗೆಯುವ ಶಪಥ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ ಮಾದರಿಯಲ್ಲಿಯೇ ದೇಶದಲ್ಲೂ ಗ್ಯಾರಂಟಿಯನ್ನು ಜಾರಿಗೊಳಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

10 ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಯಾವುದೇ ಗ್ಯಾರಂಟಿ ಈಡೇರಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೊಗ ನೀಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಅದೇ ರೀತಿ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ಹುಸಿಯಾಗಿದೆ. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕಲಾಗುವುದು ಎಂದು ನೀಡಿದ ಭರವಸೆ ಈಡೇರಿಲ್ಲ. ಬಿಜೆಪಿಯವರದ್ದು ಸುಳ್ಳಿನ ಗ್ಯಾರಂಟಿ ಎಂದು ಟೀಕಿಸಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಮಾತನಾಡಿ, ನರೇಂದ್ರ ಮೋದಿ ಮಾತಿನ ಮೂಲಕ ಮೋಡಿ ಮಾಡಿ ದೇಶದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಯಿಂದ ಖಜಾನೆ ಖಾಲಿಯಾಗುತ್ತದೆ ಎಂದು ಮೋದಿ ಟೀಕಿಸಿದ್ದರು. ಆದರೆ, ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಜಾರಿಗೊಳಿಸುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಒತ್ತು ನೀಡಲಾಗಿದೆ ಎಂದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ಜೆಡಿಎಸ್‌ನ ಅಸಲಿ ಮುಖ ಜನತೆಗೆ ಗೊತ್ತಾಗಿದೆ. ಯಾವುದೇ ಅಲ್ಪಸಂಖ್ಯಾತ ಮುಖಂಡರು ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬೆಂಬಲಿಸುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರುಣ್, ಕಾಂಗ್ರೆಸ್ ಮುಖಂಡರಾದ ಪುಷ್ಪವಲ್ಲಿ, ಮೋದಾಮಣಿ, ಟಿ.ಬಿ. ಚಿಕ್ಕಣ್ಣ, ಕೈಸರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net