ಹಿಂದು ರಾಷ್ಟ್ರ ಮಾಡ್ತೀವಿ ತಾಕತ್ತಿದ್ರೆ ತಡೀರಿ

h4-Mutalik
Published on

ಹುಬ್ಬಳ್ಳಿ: ಭಾರತವನ್ನು ನಾವು ಹಿಂದು ರಾಷ್ಟ್ರ ಮಾಡೇ ಮಾಡುತ್ತೇವೆ. ತಾಕತ್ತಿದ್ದರೆ ಕಾಂಗ್ರೆಸ್‌ನವರು ತಡಿಯಿರಿ ನೋಡೋಣ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸವಾಲ್ ಹಾಕಿದರು.
ನಗರದ ಚನ್ನಪೇಟೆಯಲ್ಲಿನ ಕರಸೇವಕ ಶ್ರೀಕಾಂತ ಪೂಜಾರ ಅವರ ಮನೆಗೆ ಗುರುವಾರ ಭೇಟಿ ನೀಡಿ ಸಾಂತ್ವನ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
2024ರಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ. ಆಗ ನಾವು ಹಿಂದು ರಾಷ್ಟ್ರ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರು ಹಿಂದು ರಾಷ್ಟ್ರ ಆಗಲ್ಲ, ಆದರೆ ಅಪಘಾನಿಸ್ತಾನ-ಪಾಕಿಸ್ತಾನ ಆದಂತೆ ಆಗಲಿದೆ ಭಾರತ ಎಂದಿದ್ದಾರೆ. ಅಂದರೆ ಅಲ್ಲಿ ಆರ್ಥಿಕ ದಿವಾಳಿ ಆಗಿದೆ. ಇಲ್ಲೂ ಆಗುತ್ತದೆ ಎಂಬ ಭೀತಿ ಇದೆ ಅವರಿಗಿದೆ. ನಮ್ಮದು ಹಿಂದು ರಾಷ್ಟ್ರ. ಹಾಗೆಯೇ ಆಗಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ವ್ಯವಸ್ಥಿತವಾಗಿ ಸುಳ್ಳು ಕೇಸ್ ಹಾಕುತ್ತಿದೆ. ಹಣ ಕೊಟ್ಟವರನ್ನು ಬಿಟ್ಟು, ಕೊಡದೇ ಇರುವವರನ್ನು ಬಂಧಿಸುತ್ತಿದ್ದಾರೆ. ಇದರಲ್ಲೂ ದುಡ್ಡು ಹೊಡೆಯುವ ಸಂಚು ಕಾಂಗ್ರೆಸ್ ಸರ್ಕಾರಕ್ಕಿದೆ. ಇಡೀ ದೇಶ ರಾಮ ಮಯವಾಗಿದೆ. ಇದು ಕಾಂಗ್ರೆಸ್‌ನವರಿಗೆ ಹೊಟ್ಟೆ ಉರಿ ತರಿಸಿದೆ. ಲೋಕಸಭಾ ಚುನಾವಣೆ ಭಯ ಶುರುವಾಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ ಸೇರಿ ಹಲವರು ದಾರಿ ತಪ್ಪಿಸುತ್ತಿದ್ದಾರೆ. ಅಬ್ಬಯ್ಯನೋ ಅಬ್ದುಲ್ಲಾ ನೋ ಗೊತ್ತಿಲ್ಲ. ಶ್ರೀಕಾಂತ ಪೂಜಾರ ಅವರನ್ನು ನಿರ್ದೋಷಿಯೆಂದು ಕೋರ್ಟ್ ಬಿಡುಗಡೆ ಮಾಡಿದೆ. ನನ್ನ ಮೇಲೂ 110 ಕೇಸ್ ಇವೆ. ನನ್ನನ್ನೂ ಗಲ್ಲಿಗೆ ಏರಿಸಬೇಕಿತ್ತು. ಹಾಗಾದರೆ ನಾನು ಕೂಡ ಗೂಂಡಾನಾ?. ಶ್ರೀಕಾಂತ ರೌಡಿಶೀಟರ್ ಅಲ್ಲ. ಕೋರ್ಟ್ ಕೂಡ ಈತನನ್ನು ಅಪರಾಧಿ ಎಂದಿಲ್ಲ. ನಿಮ್ಮ ಟಾರ್ಗೆಟ್ ಹಿಂದುತ್ವ, ರಾಮ ಭಕ್ತರ ಮೇಲೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಯಾದರು.
ಗೋದ್ರಾ ಘಟನೆಗೆ ಕಾರಣ ಮುಸ್ಲಿಮರು. ಕಾಂಗ್ರೆಸ್‌ನವರೇ ಮುಸ್ಲಿಮರಿಗೆ ಕುಮ್ಮಕ್ಕು ಕೊಡುತ್ತಿದ್ದೀರಾ ಅಥವಾ ನೀವೇನಾದರೂ ಯೋಜನೆ ರೂಪಿಸಿದ್ದೀರಾ ಗಲಭೆ ಎಬ್ಬಿಸಲು? ಎಂದು ಬಿ.ಕೆ. ಹರಿಪ್ರಸಾದ ಅವರ ಮಾತಿಗೆ ಮುತಾಲಿಕ್ ತಿವಿದರು.
ಅಧಿಕಾರಿಗಳು ಸರ್ಕಾರ ಹೇಳಿದ ಮಾತು ಕೇಳುತ್ತಾರೆ. 31 ವರ್ಷದ ನಂತರದ ಕೇಸ್ ರಿ ಓಪನ್ ಮಾಡಲು ಸಿದ್ದರಾಮಯ್ಯ ಅವರೇ ಹೇಳಿರುತ್ತಾರೆ. ಹಾಗಾಗಿ ಓಪನ್ ಮಾಡಿದ್ದಾರೆ. ನನಗೆ ಹಿಂದುತ್ವ ಆಗೋದಿಲ್ಲವೆಂದು ಸಿದ್ದರಾಮಯ್ಯ ಅವರು ಹಿಂದೊಮ್ಮೆ ಹೇಳಿದ್ದರು. ಅದರಂತೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net