

ಧಾರವಾಡ: ಡಾ. ಪುಟ್ಟರಾಜ ಗವಾಯಿಗಳ ಜನ್ಮದಿನ ನಿಮಿತ್ತ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಹಾಗೂ ಕನ್ನಡ- ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಿಂದುಸ್ತಾನಿ ಗಾಯಕ ಪಂ. ಸೋಮನಾಥ ಮರಡೂರ ಅವರಿಗೆ ಪುಟ್ಟರಾಜ ಸಮ್ಮಾನ-2021ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಗೀತೋತ್ಸವ ಸಮಾರಂಭದಲ್ಲಿ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 1 ಲಕ್ಷ ರೂ. ಹಾಗೂ ಸ್ಮರಣಿಕೆ ಒಳಗೊಂಡಿದೆ.
ಪ್ರಶಸ್ತಿ ಸ್ವೀಕರಿಸಿದ ಪಂ. ಸೋಮನಾಥ ಮರಡೂರ ಮಾತನಾಡಿ, ಗುರುಗಳ ಹೆಸರಿನಲ್ಲಿ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ. ಮೃತ್ಯುಂಜಯ ಅಪ್ಪಗಳ ಆಶೀರ್ವಾದದಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ಗುರುವಿನ ಮಾರ್ಗದರ್ಶನದಿಂದಲೇ ಸಾಧನೆ ಮಾಡಲು ಸಾಧ್ಯ. ಸಂಗೀತ ಕ್ಷೇತ್ರದಲ್ಲಿ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ, ನಮ್ಮ ಸಂಗೀತ ಪರಂಪರೆಯನ್ನು ಇನ್ನಷ್ಟು ಬೆಳೆಸಲು ಅನುಕೂಲವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಅತಿಥಿಯಾಗಿ ಪಾಲ್ಗೊಂಡ ನೈಋತ್ಯ ವಲಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲ್ಖೇಡೆ ಮಾತನಾಡಿದರು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಪಂ. ಎಂ. ವೆಂಕಟೇಶಕುಮಾರ, ಡಿ. ಕುಮಾರದಾಸ, ಡಾ. ಉದಯಕುಮಾರ ದೇಸಾಯಿ, ಉಸ್ತಾದ ಶಫೀಖ್ ಖಾನ್, ಡಾ. ಅರ್ಜುನ ವಠಾರ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಪಂ. ಕೈವಲ್ಯಕುಮಾರ ಗುರವ, ಪಂ. ಗಣಪತಿ ಭಟ್ಟ ಹಾಸಣಗಿ, ಇತರರು ಇದ್ದರು.
ಪ್ರತಿಷ್ಠಾನದ ಅಧ್ಯಕ್ಷ ಮಹಾಬಳೇಶ್ವರ ಹಾಸಿನಾಳ ಸ್ವಾಗತಿಸಿದರು. ಉಪಾಧ್ಯಕ್ಷ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಯಾರಾಮನ್ ನಿರೂಪಿಸಿದರು. ಮೊದಲಿಗೆ ವಿಜಯಪುರದ ಗಿರಿಮಲ್ಲಪ್ಪ ಭಜಂತ್ರಿ ಶಹನಾಯಿ ವಾದನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ ಸಾಥ್ ನೀಡಿದರು. ಕೊನೆಯಲ್ಲಿ ಪಂ. ಸೋಮನಾಥ ಮರಡೂರ ಗಾಯನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಶ್ರೀಧರ ಮಾಂಡ್ರೆ ಹಾಗೂ ಸಂವಾದಿನಿಯಲ್ಲಿ ಡಾ. ಸುಧಾಂಶು ಕುಲಕರ್ಣಿ ಸಾಥ್ ನೀಡಿದರು.
EndFragment