‘ಗ್ಯಾರಂಟಿ’ ತಲುಪದಿದ್ದರೆ ಅಧಿಕಾರಿಗಳೇ ಹೊಣೆ

6SPT2
ಸೋಮವಾರಪೇಟೆ ತಾಲೂಕಿನಲ್ಲಿ ವೈದ್ಯಕೀಯ ಪ್ರಕರಣಗಳಿಗೆ ಸಂಬಂಧಿಸಿದ ಸೌಲಭ್ಯ ಪಡೆಯಲು ಆಯ್ಕೆಯಾದ ಫಲಾನುಭವಿಗಳಿಗೆ ಆಹಾರ ಇಲಾಖೆಯಿಂದ ಕಾರ್ಡ್ ನೀಡಲಾಯಿತು. ಕಾಂತರಾಜ್, ಪರಮೇಶ್, ರಮೇಶ್ ಇದ್ದರು.
Published on

ಸೋಮವಾರಪೇಟೆ: ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಗಾರರಾಗಲಿದ್ದಾರೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ.ಕಾಂತರಾಜು ಎಚ್ಚರಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಧಿಕಾರಿಗಳು ಫಲಾನುಭವಿಗಳೊಂದಿಗೆ ತಾಳ್ಮೆ ಮತ್ತು ಸಂಯಮದಿಂದ ಕೆಲಸ ಮಾಡಿಕೊಡಬೇಕು. ಸರ್ಕಾರದ ಯೋಜನೆಗಳನ್ನು ಸರ್ಕಾರದ ಆದೇಶದಂತೆ ಪಂಚ ಇಲಾಖೆಗಳು ಕಾರ್ಯಗತಗೊಳಿಸಿದ ಯೋಜನೆಗಳ ಕುರಿತ ಮಾಹಿತಿಗಳು ಹಾಗೂ ಫಲಾನುಭವಿಗಳೊಂದಿಗೆ ನಡೆಸಿದ ಮಾತುಕತೆಯ ವಿವರಗಳನ್ನು ಚಿತ್ರಸಹಿತ ನೀಡಬೇಕು. ಪ್ರಗತಿ ವರದಿ ಕುರಿತ ಯಶೋಗಾಥೆ ಎಂಬ ಕಿರುಹೊತ್ತಗೆಗೆ ಪ್ರತಿ ತಿಂಗಳು ಅಧಿಕಾರಿಗಳು ಸಮಗ್ರ ಮಾಹಿತಿ ನೀಡಬೇಕೆಂದು ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಕುಟುಂಬದ ಸದಸ್ಯರು ಹೆಚ್ಚಿನ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಬಹುದು. ತಾಲೂಕಿನಲ್ಲಿ ಈಗಾಗಲೇ 5 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಆಹಾರ ಇಲಾಖೆಯ ಶಿರಸ್ತೇದಾರ್ ರಮೇಶ್ ಸಭೆಗೆ ತಿಳಿಸಿದರು.

ತಾಲೂಕಿನಲ್ಲಿ ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಭೆ ಕರೆಯಬೇಕಿದೆ. ಆಹಾರ ಇಲಾಖೆಯ ಅಧಿಕಾರಿಗಳು ಕೂಡ ಪ್ರತಿ ತಿಂಗಳು ತಪಾಸಣೆಗೆ ತೆರಳಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಆಹಾರ ಇಲಾಖೆ ನಿರೀಕ್ಷಕರು ಕಚೇರಿ ವೇಳೆಯಲ್ಲಿ ಸಮಯ ಪಾಲನೆ ಮಾಡುತ್ತಿಲ್ಲ. ಇದರ ಬಗ್ಗೆ ದೂರುಗಳು ಬರುತ್ತಿದೆ ಎಂದು ಅಧ್ಯಕ್ಷರು ಇಲಾಖೆಯ ಶಿರಸ್ತೇದಾರರಿಗೆ ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಡಿಕೇರಿ ಘಟಕದ ಪ್ರಭಾರ ವ್ಯವಸ್ಥಾಪಕ ಈರಸಯ್ಯ ಸಮಿತಿ ಸಭೆಗೆ ಹಾಜರಾಗುತ್ತಿಲ್ಲ. ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ಇಲಾಖೆ ಮಾಹಿತಿಯನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರಿಗೂ ತಿಳಿಸುತ್ತಿಲ್ಲ. ಇದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುವಂತೆ ತೀರ್ಮಾನಿಸಲಾಯಿತು.

ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಾವುದೇ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡುತ್ತಿಲ್ಲ. ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಕುರಿತು ಸಂಶಯ ಇದೆ. ಕೆಲವು ಅಂಗನವಾಡಿಗಳಲ್ಲಿ ಹೆಚ್ಚು ಸಂಖ್ಯೆಯ ದಾಖಲೆ ತೋರಿಸುತ್ತಿದ್ದಾರೆ. ಇದರ ಬಗ್ಗೆ ತನಿಖೆ ಮಾಡಬೇಕೆಂದು ಸಮಿತಿ ಸದಸ್ಯರು ಸಭೆಗೆ ಮನವಿ ಮಾಡಿದರು.

ಇದೇ ಸಂದರ್ಭ ವೈದ್ಯಕೀಯ ಪ್ರಕರಣಗಳಿಗೆ ಸಂಬಂಧಿಸಿದ ಸೌಲಭ್ಯ ಪಡೆಯಲು ಆಯ್ಕೆಯಾದ ಫಲಾನುಭವಿಗಳಿಗೆ ಆಹಾರ ಇಲಾಖೆ ವತಿಯಿಂದ ಕಾರ್ಡ್ ನೀಡಲಾಯಿತು. ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net