ಸರ್ಕಾರ ಬಿದ್ದು ಹೋದರೆ ನಾವು ಸನ್ಯಾಸಿಗಳಲ್ಲ

dvg-Mahesh-Tenginakai-23-1.jpg
Published on

ಹುಬ್ಬಳ್ಳಿ: ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಪಾದಯಾತ್ರೆ ಮಾಡುತ್ತಿದ್ದೇವೆ. ನಾವೇನು ಸರ್ಕಾರ ಬೀಳಲಿ ಎಂದು ಹೋರಾಟ ಮಾಡುತ್ತಿಲ್ಲ. ಆದರೆ, ಅದಾಗಿಯೇ ಬಿದ್ದು ಹೋದರೆ ನಾವು ಸನ್ಯಾಸಿಗಳಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಮಾರ್ಮಿಕವಾಗಿ ನುಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ದಿವಾಳಿ ಹಂತಕ್ಕೆ ತಲುಪಿದೆ. ಮುಡಾ ಹಾಗೂ ವಾಲ್ಮೀಕಿ ಹಗರಣದ ಆರೋಪವನ್ನು ಕಾಂಗ್ರೆಸ್ ಸರ್ಕಾರ ಹೊತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಜತೆಗೂಡಿ ಪಾದಯಾತ್ರೆ ಮಾಡುತ್ತಿದ್ದೇವೆ. ಭ್ರಷ್ಟಾಚಾರಿ ಸರ್ಕಾರವನ್ನು ತೆಗೆದು ಹಾಕಬೇಕೆಂದು ಜನರು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದರು.
ಪಾದಯಾತ್ರೆ ಆರಂಭದ ಬಳಿಕ ರಾಜ್ಯಕ್ಕೆ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ, ರಣದೀಪಸಿಂಗ್ ಸುರ್ಜೇವಾಲ ಅವರು ಬಂದಿದ್ದಾರೆ. ಇವರು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಡುತ್ತಾರೆ ಎಂಬ ಭಾವನೆ ನಮ್ಮಲ್ಲಿತ್ತು. ಆದರೆ, ಈ ನಾಯಕರು ಭ್ರಷ್ಟಾಚಾರಿಗಳಿಗೆ ಬೆಂಬಲಿಸಿದ್ದಾರೆ. ಇದನ್ನು ನೋಡಿದರೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಹೈಕಮಾಂಡ್ ಎಟಿಎಂ ಆಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.
ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿಎಂ ಸಿದ್ದರಾಮಯ್ಯ ಅವರು ಸತ್ಯ ಹರಿಶ್ಚಂದ್ರರಾಗಿದ್ದರೆ ಯಾಕೆ ಸದನ ನಡೆದಾಗಲೇ ಭಯಭೀತರಾಗಿದ್ದರು. ಸರಿಯಾಗಿ ಉತ್ತರ ಕೊಡದೆ ಒಂದು ದಿನದ ಮೊದಲೇ ಸದನ ಮೊಟಕುಗೊಳಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಲು ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ವರ್ಗಾವಣೆ ದಂಧೆ ಹೆಚ್ಚಾಗಿದೆ. ಯಾದಗಿರಿ ಪಿಎಸ್‌ಐ ಪರಶುರಾಮ ಮೃತಪಟ್ಟ ಬಳಿಕ ಬಿಡದಿಯ ಸಿಸಿಬಿ ಇನ್‌ಸ್ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರೆಲ್ಲ ವರ್ಗಾವಣೆ ದಂಧೆಗೆ ಬಲಿಯಾಗಿದ್ದಾರೆ. ಅವರ ಕುಟುಂಬದವರ ಹೇಳಿಕೆಯಿಂದ ಇದು ಬಯಲಾಗುತ್ತಿದೆ ಎಂದರು.
ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಬೆಂಬಲ ಸೂಚಿಸಲು ಧಾರವಾಡ ಜಿಲ್ಲೆಯಿಂದ ನಾಲ್ಕನೇ ದಿನಕ್ಕೆ 2 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆ ಅಂತ್ಯಗೊಳುವ ಮೊದಲೇ ರಾಜ್ಯದಲ್ಲಿ ಸಿಎಂ ರಾಜೀನಾಮೆ ಖಚಿತವಾಗಲಿದೆ ಎಂದು ಭವಿಷ್ಯ ನುಡಿದರು. ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಡ್ರಗ್ಸ್ ಮಾಫಿಯಾ ಮಟ್ಟ ಹಾಕುತ್ತಿದ್ದಾರೆ. ಅವರ ನಡೆ ಸ್ವಾಗತಾರ್ಹ. ನಮ್ಮ ಪಕ್ಷದಿಂದಲೂ ನಾವು ಡ್ರಗ್ಸ್ ಮಾಫಿಯಾ ವಿರುದ್ಧ ಅಭಿಯಾನ ಶುರು ಮಾಡುತ್ತೇವೆ ಎದರು.
ಮೇಯರ್ ರಾಮಣ್ಣ ಬಡಿಗೇರ, ಉಪ ಮೇಯರ್ ದುರ್ಗಮ್ಮ ಬಿಜವಾಡ, ಸಭಾ ನಾಯಕ ವೀರಣ್ಣ ಸವಡಿ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಸಂತೋಷ ಚವ್ಹಾಣ, ಬಿಜೆಪಿ ಜಿಲ್ಲಾ ವಕ್ತಾರ ರವಿ ನಾಯಕ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net