ಗುರಿ ದೊಡ್ಡದಿದ್ದರೆ ಭವಿಷ್ಯ ಸುಂದರ

1
Published on

ವಿದ್ಯಾರ್ಥಿ ಜೀವನದಲ್ಲಿ ಗುರಿ, ಆಲೋಚನೆಗಳು ದೊಡ್ಡದಾಗಿದ್ದರೆ ಭವಿಷ್ಯ ಸುಂದರವಾಗುತ್ತದೆ ಎಂದು ಶಾಸಕ ಕೆ.ಹರೀಶ್‌ಗೌಡ ತಿಳಿಸಿದರು.
ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 2023-24ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.


ಆದರ್ಶಯುತ ಮಾರ್ಗ ಬದುಕಿನ ಮುನ್ನಡೆಗೆ ಕಾರಣವಾಗಿರುತ್ತದೆ. ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು, ಗುರು-ಹಿರಿಯರಿಗೆ ಗೌರವ ಕೊಡಬೇಕು. ಶಿಕ್ಷಣದ ಜತೆಗೆ ಸಂಸ್ಕಾರ ಕಲಿಯಬೇಕು. ಗುರಿ ಇದ್ದಲ್ಲಿ ಮಾರ್ಗ ಯಾವಾಗಲು ಇದ್ದೆ ಇರುತ್ತದೆ ಎನ್ನುವುದನ್ನು ಅರಿತು ವಿದ್ಯಾರ್ಥಿಗಳು ಶಿಕ್ಷಣ ಪಡೆಯಬೇಕು ಎಂದರು.

ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಇಷ್ಟೊಂದು ಅಂಕ ಪಡೆದಿರುವುದು ನೋಡಿದರೆ ಖುಷಿಯಾಗುತ್ತದೆ. ಮುಂದೆ ಇನ್ನೂ ಉತ್ತಮ ಫಲಿತಾಂಶ ಪಡೆಯುವಂತಾಗಲಿದೆ. ಕಾಲೇಜಿಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದರು.

ಇದೇ ವೇಳೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು. ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಪ್ರಾಂಶುಪಾಲ ಪಿ.ಸೋಮಣ್ಣ, ಉಪ ಪ್ರಾಂಶುಪಾಲರಾದ ತಿರುಮಲಾಂಬ, ನಿವೃತ್ತ ಪ್ರಾಂಶುಪಾಲ ವ.ನಂ.ಶಿವರಾಮು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net