

ಬೀರೂರು: ಬೇಸಿಗೆ ಆರಂಭವಾಗಿದ್ದು, ತೋಟಗಳಿಗೆ ಸಮರ್ಪಕ ವಿದ್ಯುತ್ ನೀಡುವಲ್ಲಿ ಅಧಿಕಾರಿಗಳು ತಾತ್ಸಾರ ತೋರುತ್ತಿದ್ದಾರೆ. ತೋಟಗಳು ನೀರಿಲ್ಲದೆ ಒಣಗಿದರೆ ಮೆಸ್ಕಾಂ ಅಧಿಕಾರಿಗಳ ಹೆಸರು ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.
ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮೆಸ್ಕಾಂ ವಲಯದ ಎಮ್ಮೆದೊಡ್ಡಿ, ಹೊಗರೇಹಳ್ಳಿ, ಆಲದಹಳ್ಳಿ, ದೇವರಹಳ್ಳಿ ಸೇರಿದಂತೆ ಲಿಂಗದಹಳ್ಳಿ ಲೈನ್‌ನಲ್ಲಿ ಮೂರು ಗಂಟೆಯೂ ವಿದ್ಯುತ್ ನೀಡುತ್ತಿಲ್ಲ. ಅದು ಕೂಡ ಓಲ್ಟೇಜ್ ಇರುವುದಿಲ್ಲ ಈ ಬಗ್ಗೆ ಲೈನ್‌ಮ್ಯಾನ್‌ಗೆ ಕರೆ ಮಾಡಿ ರೈತರೊಂದಿಗೆ ಜಗಳಕ್ಕೆ ಮುಂದಾಗುತ್ತಾನೆ ಎಂದು ದೂರಿದರು.
ಕಡೂರು ತಾಲೂಕು ರೈತ ಸಂಘದ ಅಧ್ಯಕ್ಷ ಸೋಮಪ್ಪ ಮಾತನಾಡಿ, ಬೀರೂರು ಪಟ್ಟಣದಲ್ಲಿ ಕುಡಿಯುವ ನೀರನ್ನು ಬಿಟ್ಟಾಗ ಮೆಸ್ಕಾಂನವರು ವಿದ್ಯುತ್‌ಸಂಪರ್ಕ ಕಡಿತ ಮಾಡುತ್ತಾರೆ. ನಂತರ ಕರೆಂಟ್ ನೀಡುವ ಹೊತ್ತಿಗಾಗಲೇ ಪುರಸಭೆ ಅವರು ನೀರನ್ನು ನಿಲ್ಲಿಸಿರುತ್ತಾರೆ. ನಾವು ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ ಎಂದು ಆರೋಪಿಸಿದರು.
ಇಇ ಲಿಂಗರಾಜು, ಎಇ ವಿಜಯಕುಮಾರ್, ಹಿರೇನಲ್ಲೂರು ಜೆಇ ಕಿಶೋರ್, ಎಜೆಟಿ ಯತೀಶ್ ಹಾಗೂ ರೈತ ಸಂಘ ಹಾಗೂ ಹಸಿರು ಸೇನೆಯ ಬಿ.ಎಂ.ರುದ್ರೇಶ್, ಜಿಲ್ಲಾ ಉಪಾಧ್ಯಕ್ಷ ಬಿ.ಹೆಚ್.ನಾಗರಾಜ್, ಬೀರೂರು ಹೋಬಳಿ ಅಧ್ಯಕ್ಷ ಬಿ.ಎಸ್.ಕುಮಾರಸ್ವಾಮಿ, ಬಿ.ಎನ್.ಮಲ್ಲಿಕಾರ್ಜುನ್, ಜಯಣ್ಣ, ಬಾಬು ಹಾಗೂ ಸುತ್ತಮುತ್ತಲ ಗ್ರಾಮದ ರೈತರು ಇದ್ದರು.