ಕಾಡಾನೆ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದರೆ ಹೋರಾಟ

28blrp2
Published on

ಬೇಲೂರು : ಒಂದೂವರೆ ತಿಂಗಳಿಂದ ಬೀಡು ಬಿಟ್ಟು ಬೆಳೆ ನಾಶಪಡಿಸುತ್ತಿರುವ ಕಾಡಾನೆಗಳನ್ನು ಇನ್ನೆರಡು ದಿನಗಳಲ್ಲಿ ಬಿಕ್ಕೋಡು ಭಾಗದಿಂದ ಓಡಿಸದಿದ್ದಲ್ಲಿ ಬಿಕ್ಕೋಡು ಬಂದ್ ಮಾಡಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಶಾಸಕ ಎಚ್.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ಬಿಕ್ಕೋಡಿನ ವಿನಾಯಕ ಸಮುದಾಯ ಭವನದಲ್ಲಿ ಶನಿವಾರ ನಡೆದ ರೈತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಕಾಫಿ ಬೆಳೆಗಾರ ಬಿಕ್ಕೋಡು ಶಿವಶಂಕರ್ ಮಾತನಾಡಿ, ಕಾಡಾನೆಗಳು ಅರೇಹಳ್ಳಿ ಹೋಬಳಿ ಭಾಗದಿಂದ ಅರೆಮಲೆನಾಡು ಭಾಗದ ಬಿಕ್ಕೋಡು ಭಾಗಕ್ಕೆ ಧಾವಿಸಿ ದಾಂಧಲೆ ನಡೆಸುತ್ತಿದೆ. ಇದಕ್ಕೆ ಅರಣ್ಯಾಧಿಕಾರಿಗಳೇ ನೇರ ಕಾರಣ. ಬೆಳಗೆಲ್ಲ ಬಿಕ್ಕೋಡು ಎಸ್ಟೇಟ್‌ನಲ್ಲಿ ಬೀಡು ಬಿಟ್ಟು ಕತ್ತಲಾಗುತ್ತಿದ್ದಂತೆ ಸಮೀಪದ ಗ್ರಾಮಗಳಲ್ಲಿ ಬೆಳೆ ಬೆಳೆದಿರುವ ಜಮೀನುಗಳಿಗೆ ನುಗ್ಗಿ ಬೆಳೆ ತಿಂದು ನಾಶಪಡಿಸುತ್ತಿವೆ. 50 ಆನೆಗಳು ಒಂದು ಎಕರೆ ಜಮೀನಿಗೆ ನುಗ್ಗಿದರೆ ಅಲ್ಲಿ ಏನುಳಿಯುತ್ತದೆ ಎಂದರು.

ಸ್ಥಳೀಯರಾದ ಚಂದ್ರಶೇಖರ್ ಮತ್ತು ಸುಜಾತಾ ಮಾತನಾಡಿ, ಬಿಕ್ಕೋಡು ಭಾಗದಲ್ಲಿ ನೂರಾರು ಎಕರೆಯಲ್ಲಿ ಬೆಳೆದಿರುವ ಮುಸುಕಿನ ಜೋಳದ ಬೆಳೆ ಕಾಡಾನೆಗಳ ಪಾಲಾಗುತ್ತಿದೆ. ಅರಣ್ಯ ಇಲಾಖೆಯವರೇ ಆನೆಗಳನ್ನು ಜೋಳದ ಹೊಲಕ್ಕೆ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಆನೆಗಳನ್ನು ಓಡಿಸದ ಹೊರತು ಯಾವುದೇ ಪ್ರಯೋಜನವಿಲ್ಲ ಎಂದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಎರಡು ವರ್ಷದಿಂದ ತಾಲೂಕಿನ ಅರೇಹಳ್ಳಿ ಮತ್ತು ಬಿಕ್ಕೋಡು ಹೋಬಳಿಗಳಲ್ಲಿ ಕಾಡಾನೆ ಸಮಸ್ಯೆ ಹೆಚ್ಚಾಗಿದೆ. ಈ ವಿಚಾರವಾಗಿ ವಿಧಾನಸಭೆಯಲ್ಲಿ ಮಾತನಾಡಿದರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸರ್ಕಾರ ವಿಶೇಷ ಗಮನ ನೀಡುತ್ತಿದೆ ಹಾಸನ ಜಿಲ್ಲೆಯನ್ನು ಕಡೆಗಾಣಿಸುತ್ತಿದೆ ಎಂದರು.


ಜತೆಗೆ ಅಲ್ಲಿನವರು ಆನೆಗಳನ್ನು ನಮ್ಮ ಜಿಲ್ಲೆಯತ್ತ ಓಡಿಸುತ್ತಿದ್ದಾರೆ. ಇದಕ್ಕೆ ಇಲ್ಲಿನ ಅರಣ್ಯಾಧಿಕಾರಿಗಳ ವೈಫಲ್ಯವೇ ಕಾರಣ. ಇಲ್ಲಿ ನೂರಾರು ಎಕರೆ ಬೆಳೆ ನಾಶ, ಪ್ರಾಣ ಹಾನಿಯಾಗಿದೆ. ಅರಣ್ಯ ಮಂತ್ರಿಗಳ ಗಮನಕ್ಕೆ ತಂದರೂ ಅವರೂ ಪ್ರಯೋಜನವಾಗದ ಕಾರಣ ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ನಮಗೆ ಆನೆಗಳನ್ನು ಇಲ್ಲಿಂದ ಓಡಿಸಬೇಕು. ಶಾಶ್ವತ ಪರಿಹಾರ ಬೇಕೆಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೂ ಮನವಿ ಮಾಡಿದ್ದೇನೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ರೈತರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ಇಲ್ಲಿಂದ ವಿದಾನಸೌಧದ ಮುಂದೆ ಪ್ರತಿಭಟನೆ ಮಾಡೋಣ ಎಂದರು.

ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್ ಮಾತನಾಡಿ, ಆನೆಗಳು ಬಾರದಂತೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ 35 ಕಿ.ಮೀ. ಕೆಲಸ ಮುಗಿದಿದೆ. ಮಧ್ಯೆ ಖಾಸಗಿ ಜಮೀನು ಬಂದಿದ್ದರಿಂದ ಕೆಲಸ ಪೂರ್ಣಗೊಂಡಿಲ್ಲ. ಪೂರ್ಣವಾದರೆ ಆನೆಗಳು ಒಳ ಬರುವುದಿಲ್ಲ. ಕೆಲದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಸಭೆ ನಡೆಸಲಾಗಿದ್ದು, ನಮ್ಮ ಭಾಗಕ್ಕೆ ಆನೆಗಳನ್ನು ಓಡಿಸದಂತೆ ತಿಳಿಸಲಾಗಿದೆ. ಈಗ 53 ಆನೆಗಳು ಈ ಭಾಗದಲ್ಲಿದ್ದು ಅವುಗಳನ್ನು ಸ್ಥಳಾಂತರ ಮಾಡಲು ನಮ್ಮಗೆ ಅಧಿಕಾರವಿಲ್ಲ. ಸರ್ಕಾರದಿಂದ ಅನುಮತಿ ಸಿಗಬೇಕು. ಸಾಧ್ಯವಾದಷ್ಟು ಆನೆಗಳನ್ನು ಇಲ್ಲಿಂದ ಓಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಜಯ ಕರ್ನಾಟಕ ಸಂಘಟನೆ ಹೋಬಳಿ ಅಧ್ಯಕ್ಷ ಅಬ್ದುಲ್ ರಜಾಕ್, ಬಿಕ್ಕೋಡು ಗ್ರಾಪಂ ಅಧ್ಯಕ್ಷ ಹೇಮರಾಜ್ ಮಾತನಾಡಿದರು. ಸಹಾಯಕ ಅರಣ್ಯಾಧಿಕಾರಿ ಪುಲ್ಕೀತ್ ಮೀನಾ, ವಲಯ ಅರಣ್ಯಾಧಿಕಾರಿ ಯತೀಶ, ಭೂಮಿಪುತ್ರ ರೈತ ಸಂಘದ ಅಧ್ಯಕ್ಷ ರೇಣುಕಾನಂದ್, ಕೆಡಿಪಿ ಸದಸ್ಯ ಚೇತನ್, ಗ್ರಾಪಂ ಸದಸ್ಯ ಮೋಹನ್. ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಗೋವಿಂದಶೆಟ್ಟಿ, ಪಿಡಿಒ ತಾರಾನಾಥ ಸೇರಿದಂತೆ ಸ್ಥಳೀಯ ರೈತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net