

ಬಾಳೆಹೊನ್ನೂರು: ಒಬ್ಬ ವ್ಯಕ್ತಿ ಕಣ್ಣು ದಾನ ಮಾಡಿದರೆ ಏಳು ಜನರಿಗೆ ದೃಷ್ಠಿ ನೀಡಲು ಸಾಧ್ಯ ಎಂದು ಚಿಕ್ಕಮಗಳೂರಿನ ನೇತ್ರ ತಜ್ಞೆ ರಶ್ಮಿ ಹೇಳಿದರು. ಪಟ್ಟಣದ ಇನ್ನರ್‌ವ್ಹೀಲ್ ಕ್ಲಬ್ ಹಾಗೂ ಸ್ವಿಸ್‌ಲ್ಯಾಂಡ್ ಐ ಕೇರ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಒಬ್ಬರ ನೇತ್ರದಾನದಿಂದ ಏಳು ಜನರಿಗೆ ಅಂಧತ್ವ ನಿವಾರಣೆ ಮಾಡಬಹುದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ನೇತ್ರದಾನ ನೋಂದಣಿ ಮಾಡಿಕೊಳ್ಳಬೇಕು. ನಿಮ್ಮ ಮರಣದ ನಂತರವೂ ಪ್ರಪಂಚ ನೋಡುವ ಭಾಗ್ಯ ದೊರೆಯಲಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಮಕ್ಕಳಲ್ಲಿ ದೃಷ್ಟಿ ದೋಷ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಪಾಲಕರು ಈ ಬಗ್ಗೆ ಎಚ್ಚರಿಕೆ ವಹಿಸಿ ಮೊಬೈಲ್ ಬಳಕೆ ಕಡಿಮೆ ಮಾಡಿಕೊಳ್ಳಬೇಕು ಎಂದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮೇನಕಾ ಜಯಪ್ರಕಾಶ್ ಮಾತನಾಡಿ, ನೇತ್ರಗಳ ಕುರಿತು ಕಾಳಜಿ ವಹಿಸಬೇಕಿದೆ. ಪ್ರತಿಯೊಬ್ಬರು ವರ್ಷಕ್ಕೆ ಒಮ್ಮೆಯಾದರೂ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನಿಂದ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಕಣ್ಣುಗಳು ಸರಿಯಿದ್ದರೆ ವಿಶ್ವವೇ ನಮ್ಮ ಅಂಗೈಯಲ್ಲಿ ಇದ್ದಂತೆ. ಈ ಹಿನ್ನೆಲೆಯಲ್ಲಿ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಇನ್ನರ್‌ವ್ಹೀಲ್ ಕ್ಲಬ್ ಕಾರ್ಯದರ್ಶಿ ಕಾಂಚನಾ ಸುಧಾಕರ್, ಜಿಲ್ಲಾ ಖಜಾಂಚಿ ವೈಶಾಲಿ ಕುಡ್ವ, ಸ್ವಿಸ್‌ಲ್ಯಾಂಡ್ ಐ ಕೇರ್‌ನ ಮುಖ್ಯಸ್ಥ ಅಬ್ದುಲ್ ರಶೀದ್ ಅಹ್ಮದ್, ಸಲ್ಮಾನ್ ಮತ್ತಿತರರು ಹಾಜರಿದ್ದರು.